ಕಾರ್ಕಳ: ಬಡವರು, ನಿರ್ಗತಿಕರು ಹಾಗೂ ತುಳಿತಕ್ಕೊಳಗಾದವರ ಕಷ್ಟಗಳನ್ನು ಸಾಧ್ಯವಾದಷ್ಟು ಅರಿತುಕೊಂಡು, ಅವರ ಬದುಕಿನಲ್ಲಿ ಸಂತೋಷವನ್ನು ತರಲು ನಾವು ಕಾರಣರಾದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.

ಇತಿಹಾಸ ಪ್ರಸಿದ್ಧ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದ ಸಮರ್ಪಣೆಯ ದಶಮಾನೋತ್ಸವ ಹಾಗೂ ಪಾಲಕ ಸಂತ ಸಂತ ಲಾರೆನ್ಸರ ಹಬ್ಬದ ಪ್ರಯುಕ್ತ ನಡೆದ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡು, ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧರ್ಮಸಭೆಯ ಸಂಪತ್ತನ್ನು ಬಡವರು ಹಾಗೂ ನಿರ್ಗತಿಕರಿಗಾಗಿ ಹಂಚಿದ ಸಂತ ಲಾರೆನ್ಸ್ ಅವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರು ಬೋಧಿಸಿದ ಹಾಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ತತ್ವಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಸಮಾಜದಲ್ಲಿ ಪ್ರೀತಿ ಮತ್ತು ಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.


ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಪವಿತ್ರ ಬಲಿಪೂಜೆಯಲ್ಲಿ ಪ್ರವಚನ ನೀಡಿದರು. ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತಿ ವಂ. ಮೊನ್ಸಿಂಜರ್ ಫ್ರಾನ್ಸಿಸ್ ಲುವಿಸ್, ಚಾನ್ಸಲರ್ ವಂ. ಸ್ಟೀವನ್ ಡಿಸೋಜಾ ಸೇರಿದಂತೆ ಹಲವಾರು ಧರ್ಮಗುರುಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಬಲಿಪೂಜೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಬಾಸಿಲಿಕಾದ ಪ್ರಧಾನ ಪ್ರವೇಶ ದ್ವಾರದ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಅವರ ನೇತೃತ್ವದಲ್ಲಿ ಕ್ರಿಸ್ತ ಕೃಪಾ ಕಟ್ಟಡದ ಆಶೀರ್ವಾದ ಹಾಗೂ ನೂತನವಾಗಿ ನಿರ್ಮಿಸಲಾಗುತ್ತಿರುವ ಬಲಿಪೀಠದ ಶಂಕುಸ್ಥಾಪನೆ ನೆರವೇರಿಸಲಾಯಿತು.



ಬಲಿಪೂಜೆಯ ಬಳಿಕ ನಡೆದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಕ್ರಿಸ್ತ ಕೃಪಾ ಕಟ್ಟಡದ ನಿರ್ಮಾಣದಲ್ಲಿ ಶ್ರಮವಹಿಸಿದ ಹಾಗೂ ಬಾಸಿಲಿಕಾದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ವಂ. ಅಲ್ಬನ್ ಡಿಸೋಜಾ, ವಂ. ಜಾರ್ಜ್ ಡಿಸೋಜಾ ಹಾಗೂ ವಂ. ರೋಮನ್ ಮಸ್ಕರೇನಸ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಹಾಗೂ ಹಾಲಿ ಧರ್ಮಾಧ್ಯಕ್ಷರನ್ನು ಬಾಸಿಲಿಕಾದ ಪರವಾಗಿ ಗೌರವಿಸಲಾಯಿತು.


ಬಾಸಿಲಿಕಾದ ನಿರ್ದೇಶಕರಾದ ವಂ. ಅಲ್ಬನ್ ಡಿಸೋಜಾ ಸ್ವಾಗತಿಸಿದರು. ಪಾಲನಾ ಮಂಡಳಿಯ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತಲಿನೊ ದಶಮಾನೋತ್ಸವದ ವರದಿ ವಾಚಿಸಿದರು. ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ವಂದೀಶ್ ಮಥಾಯಸ್ ವಂದನಾರ್ಪಣೆ ಸಲ್ಲಿಸಿದರು. ವಿಲ್ಸನ್ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.


ವೇದಿಕೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತಿ ವಂ. ಮೊನ್ಸಿಂಜರ್ ಫ್ರಾನ್ಸಿಸ್ ಲುವಿಸ್ ಹಾಗೂ ಪಾಲನಾ ಆಯೋಗಗಳ ಸಂಯೋಜಕರಾದ ರೀಟಾ ಲೋಬೊ ಉಪಸ್ಥಿತರಿದ್ದರು.




