ಉಡುಪಿ: ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಸೆಪ್ಟಂಬರ್ 18 ರಂದು ಜಿಲ್ಲೆಯ ಹೆಬ್ರಿಯಲ್ಲಿ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ನಡೆಸಲಿರುವ ಸಭೆಯ ಕುರಿತು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಮುಖ್ಯಮಂತ್ರಿಗಳು ಸೆ. 18 ರಂದು ಹೆಬ್ರಿಯ ಪದವಿ ಕಾಲೇಜಿನ ಆವರಣದಲ್ಲಿ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮದ ಸಂದರ್ಭದಲ್ಲಿ ಶಿಷ್ಠಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದ ಅವರು, ಪೊಲೀಸ್ ಇಲಾಖೆಯವರು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗದಂತೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು. ಕಸ್ತೂರಿ ರಂಗನ್ ವರದಿಯಿಂದ ಜಿಲ್ಲೆಯ 35 ಗ್ರಾಮಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿಯ ಸ್ಪಷ್ಟ ಚಿತ್ರಣವನ್ನು ಜನಸಾಮಾನ್ಯರಿಂದ ಪಡೆಯಲಿದ್ದಾರೆ ಎಂದರು.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡ ಆಂಬುಲೆನ್ಸ್ ವ್ಯವಸ್ಥೆ ಒದಗಿಸಬೇಕು. ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಸನ್ನದ್ಧರಾಗಿರಬೇಕು ಎಂದ ಅವರು, ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯ ಅಧಿಸೂಚನೆಯಿಂದ ಸಮಸ್ಯೆ ಉಂಟಾಗಬಹುದಾದ ರೈತರು, ಬುಡಕಟ್ಟು ಜನಾಂಗದವರು, ಅರಣ್ಯ ವಾಸಿಗಳು ಸೇರಿದಂತೆ ಮತ್ತಿತರ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಡಿ.ಎಫ್.ಓ ರುಥ್ರೇನ್ ಪಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎ.ಎಸ್.ಪಿ ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.




