Monday, September 14, 2026

ಕರಾವಳಿ ಸಚಿವ ಸಂಪುಟ ಸಭೆ: ₹5,000 ಕೋಟಿ ವಿಶೇಷ ಪ್ಯಾಕೇಜ್ ಸೇರಿ ಪ್ರಮುಖ ಬೇಡಿಕೆಗಳಿಗೆ ಶಾಸಕ ಮಂಜುನಾಥ್ ಭಂಡಾರಿ ಮನವಿ

ಮಂಗಳೂರು: ಕರಾವಳಿ ಭಾಗದ ಸುದೀರ್ಘ ಬೇಡಿಕೆಗಳು ಹಾಗೂ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮಗ್ರ ಮನವಿ ಪತ್ರ ಸಲ್ಲಿಸಿದ್ದಾರೆ.

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳ ಆರ್ಥಿಕತೆ, ಮೀನುಗಾರಿಕೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಮಹತ್ವದ ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ. ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ₹5,000 ಕೋಟಿ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಸಚಿವ ಸಂಪುಟದ ಕಾರ್ಯಸೂಚಿಯಲ್ಲಿ ಸೇರಿಸುವಂತೆ ಮನವಿ ಮಾಡಿದ್ದಾರೆ.

ಶಾಸಕರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಈ ಕುರಿತು ಅಗತ್ಯ ಕ್ರಮ ಕೈಗೊಂಡು ಪ್ರಮುಖ ಅಂಶಗಳನ್ನು ಸಂಪುಟದ ಅಜೆಂಡಾದಲ್ಲಿ ಸೇರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕರಾವಳಿಯ ನೈಜ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವ ಸಂಪುಟ ಸಭೆಯು ಸೂಕ್ತ ವೇದಿಕೆಯಾಗಿದ್ದು, ಯುವಜನರಿಗೆ ಸ್ಥಳೀಯ ಉದ್ಯೋಗಾವಕಾಶ ಕಲ್ಪಿಸುವ ಸುಧಾರಿತ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ಕರಾವಳಿ ಸವೆತಕ್ಕೆ ಶಾಶ್ವತ ಪರಿಹಾರ ಹಾಗೂ ರೈತರು ಮತ್ತು ಮೀನುಗಾರರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳಿಗೆ ತಕ್ಷಣ ಆಡಳಿತಾತ್ಮಕ ಅನುಮೋದನೆ ಮತ್ತು ಅಗತ್ಯ ಅನುದಾನ ನೀಡಬೇಕೆಂದು ಭಂಡಾರಿ ಒತ್ತಾಯಿಸಿದ್ದಾರೆ.

ಮನವಿಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ಕೃಷಿ ಹಾಗೂ ತೋಟಗಾರಿಕೆ ಡಿಪ್ಲೋಮಾ ಕಾಲೇಜನ್ನು ಕೃಷಿ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಪ್ರಮುಖವಾಗಿ ಮುಂದಿಡಲಾಗಿದೆ. ಕಾಲೇಜಿನ 342 ಎಕರೆ ಭೂಮಿ ಮತ್ತು ಸುಮಾರು ₹20 ಕೋಟಿ ಮೌಲ್ಯದ ಮೂಲಸೌಕರ್ಯಗಳನ್ನು ಬಳಸಿಕೊಂಡು, ಹೆಚ್ಚುವರಿಯಾಗಿ ₹10 ಕೋಟಿ ಅನುದಾನ ಒದಗಿಸಿ, ಗುತ್ತಿಗೆ ಆಧಾರದ ಮೇಲೆ 10 ಬೋಧಕ ಸಿಬ್ಬಂದಿಯನ್ನು ನೇಮಿಸಿ ಪದವಿ ಮಹಾವಿದ್ಯಾಲಯ ಆರಂಭಿಸುವಂತೆ ಕೋರಲಾಗಿದೆ. ಬ್ರಹ್ಮಾವರ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಕೃಷಿ ಡಿಪ್ಲೋಮಾ ಕೋರ್ಸ್‌ಗಳನ್ನು ದಾವಣಗೆರೆ ಜಿಲ್ಲೆಯ ಕತ್ತಲಗೆರೆಯಲ್ಲಿರುವ ವಿಶ್ವವಿದ್ಯಾಲಯದ ಆವರಣಕ್ಕೆ ಸ್ಥಳಾಂತರಿಸುವಂತೆಯೂ ಮನವಿ ಮಾಡಲಾಗಿದೆ.

ಕರಾವಳಿ ಪ್ರದೇಶದ ಮೂಲಸೌಕರ್ಯ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ₹5,000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುವುದು, ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳುವುದು ಹಾಗೂ ಮಂಗಳೂರು ಮೀನುಗಾರಿಕೆ ಕಾಲೇಜನ್ನು ಪ್ರತ್ಯೇಕ ಮೀನುಗಾರಿಕಾ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸುವ ಬೇಡಿಕೆಗಳನ್ನೂ ಸಲ್ಲಿಸಲಾಗಿದೆ. ಮೀನುಗಾರಿಕೆ, ಜಲಕೃಷಿ, ಸಾಗರ ವಿಜ್ಞಾನ, ಮೀನು ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶವನ್ನು ಪ್ರಸ್ತಾವದಲ್ಲಿ ವಿವರಿಸಲಾಗಿದೆ.

ರಾಜ್ಯದಲ್ಲಿ ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಮೀನುಗಾರರ ಸಮಸ್ಯೆಗಳ ಪರಿಹಾರ ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ‘ಕರ್ನಾಟಕ ಮೀನುಗಾರಿಕಾ ಪರಿಷತ್ತು’ ಸ್ಥಾಪಿಸುವಂತೆ ಹಾಗೂ ಮಂಗಳೂರಿನಲ್ಲಿ ಜಲಕೃಷಿ, ಮೀನು ಸಾಕಾಣಿಕೆ, ಶೀತಲ ಸರಪಳಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ಉತ್ತೇಜನಕ್ಕಾಗಿ ಆಧುನಿಕ ಅಕ್ವಾಪಾರ್ಕ್ ನಿರ್ಮಿಸುವಂತೆ ಮನವಿ ಮಾಡಲಾಗಿದೆ. ಮೀನುಗಾರಿಕೆ ಸಂದರ್ಭದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ₹5 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸುವುದು, ಬೋಟ್‌ಗಳಿಗೆ ನೀಡುವ ಡೀಸೆಲ್ ಸಬ್ಸಿಡಿಯನ್ನು ಹೆಚ್ಚಿಸುವುದು ಮತ್ತು ಪ್ರಮುಖ ಮೀನುಗಾರಿಕಾ ಕೇಂದ್ರಗಳಲ್ಲಿ ಆಧುನಿಕ ಕೋಲ್ಡ್ ಸ್ಟೋರೇಜ್ ಹಾಗೂ ಶೀತಲೀಕರಣ ಘಟಕಗಳನ್ನು ನಿರ್ಮಿಸುವ ಬೇಡಿಕೆಗಳೂ ಸೇರಿವೆ.

ಕರಾವಳಿಯ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ಸ್ಥಳೀಯ ಉದ್ಯೋಗ ಹಾಗೂ ಸ್ವಯಂ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 25 ಎಂಜಿನಿಯರಿಂಗ್, ಪಾಲಿಟೆಕ್ನಿಕ್, ಐಟಿಐ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜುಗಳನ್ನು ಒಳಗೊಂಡ ಉದ್ಯಮಾಧಾರಿತ ಸುಧಾರಿತ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸುವಂತೆ ಶಾಸಕ ಭಂಡಾರಿ ಕೋರಿದ್ದಾರೆ.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಗುತ್ತಿಗೆ ನೀಡಲಾಗಿರುವ 356 ಎಕರೆ ಜಮೀನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಅಧಿಕೃತವಾಗಿ ಮಂಜೂರು ಮಾಡುವುದು, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯನ್ನಾಗಿ ಪರಿವರ್ತಿಸಿ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ನೇಮಿಸುವುದು ಹಾಗೂ ಪರಿಸರ ಸಂರಕ್ಷಣೆ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ. ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವ ಪಿಲಿಕುಳದ ಅರ್ಬನ್ ಇಕೋ ಪಾರ್ಕ್ ಯೋಜನೆಗೆ ಬಾಕಿ ಉಳಿದಿರುವ ₹12.60 ಕೋಟಿ ಅನುದಾನ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಲಾಗಿದೆ.

ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾರವಾರದ ಗೋಕರ್ಣ ಮತ್ತು ಮುರುಡೇಶ್ವರದಿಂದ ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಶ್ರೀಕೃಷ್ಣ ಮಠ, ಚಿಕ್ಕಮಗಳೂರಿನ ಶೃಂಗೇರಿ ಮತ್ತು ಹೊರನಾಡು, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹಾಗೂ ಮಂಗಳಾದೇವಿ ದೇವಾಲಯಗಳನ್ನು ಸಂಪರ್ಕಿಸುವ ‘ಕರಾವಳಿ ಟೆಂಪಲ್ ಟೂರಿಸಂ’ ಕಾರಿಡಾರ್ ರೂಪಿಸುವ ಪ್ರಸ್ತಾವವನ್ನು ಮುಂದಿಡಲಾಗಿದೆ.

ಮಂಗಳೂರಿನ ತಲಪಾಡಿಯಿಂದ ಉಡುಪಿ ಜಿಲ್ಲೆಯ ಬೈಂದೂರಿನವರೆಗೆ ಸಮುದ್ರ ತೀರಕ್ಕೆ ಸಮಾನಾಂತರವಾಗಿ ಸುಸಜ್ಜಿತ ರಸ್ತೆ ನಿರ್ಮಿಸುವುದು, ಸಮುದ್ರ ತೀರದಲ್ಲಿ ಸುಮಾರು 150 ಎಕರೆ ಪ್ರದೇಶವನ್ನು ಪ್ರವಾಸೋದ್ಯಮ ವಲಯವಾಗಿ ಗುರುತಿಸುವುದು ಹಾಗೂ ಕೇರಳದ ಬೇಕಲ್ ಮಾದರಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಹೋಟೆಲ್‌ಗಳನ್ನು ಸ್ಥಾಪಿಸಲು ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವಂತೆ ಕೋರಲಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಭೆ-ಸಮಾರಂಭಗಳನ್ನು ಆಯೋಜಿಸಲು ಕನ್ವೆನ್ಷನ್ ಸೆಂಟರ್ ನಿರ್ಮಿಸುವುದು ಹಾಗೂ ಸಾರ್ವಜನಿಕರಿಗಾಗಿ ಮಕ್ಕಳ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಬೇಡಿಕೆಯೂ ಇದೆ.

ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಯಕ್ಷಗಾನ, ಬಯಲಾಟ, ಪಾರಂಪರಿಕ ಹಾಗೂ ಆಧುನಿಕ ಕಂಬಳಗಳು ಮತ್ತು ಕೊರಗ, ಮರಾಟಿ ನಾಯ್ಕ ಹಾಗೂ ಕುಡುಬಿ ಸಮುದಾಯಗಳ ಗುಮಟೆ ಕುಣಿತ, ಗೋಂದೋಳು, ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲೆಗಳಿಗೆ ವಾರ್ಷಿಕ ಕನಿಷ್ಠ ₹10 ಕೋಟಿ ವಿಶೇಷ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ.

ಉಡುಪಿ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ₹7 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದಿವಂಗತ ಆಸ್ಕರ್ ಫೆರ್ನಾಂಡಿಸ್ ಕಬಡ್ಡಿ ಕ್ರೀಡಾಂಗಣದ ನಕ್ಷೆ ಮತ್ತು ಯೋಜನೆಗೆ ಸಚಿವ ಸಂಪುಟದ ಅನುಮೋದನೆ ನೀಡುವುದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕ್ರೀಡಾಂಗಣಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮೀಸಲಿಡುವುದು ಮತ್ತು ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವಂತೆಯೂ ಶಾಸಕರು ಕೋರಿದ್ದಾರೆ.

ಇದಲ್ಲದೆ, ಉಡುಪಿ ಜಿಲ್ಲೆಯ ಬೆಳಪು ಗ್ರಾಮದಲ್ಲಿ ಉನ್ನತ ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಸಿಎಸ್‌ಆರ್ ನಿಧಿಯ ನೆರವಿನೊಂದಿಗೆ ‘ಭಾರತ್ ಜೋಡೋ ಕ್ರೀಡಾ ವಿಶ್ವವಿದ್ಯಾಲಯ’ ಸ್ಥಾಪಿಸುವ ಪ್ರಸ್ತಾವವನ್ನೂ ಮನವಿಯಲ್ಲಿ ಸೇರಿಸಲಾಗಿದೆ. ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಈ ಎಲ್ಲ ಬೇಡಿಕೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಂಜುನಾಥ್ ಭಂಡಾರಿ ಅವರು ಮನವಿ ಮಾಡಿದ್ದಾರೆ.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.