ಕುಂದಾಪುರ: ದಿ. 21, ಅಗಸ್ಟ್, 2026ರಂದು, ಕುಂದಾಪುರದ ಹೊಟೇಲಿನಲ್ಲಿ ತನ್ನ ಪತ್ನಿ ಹಾಗು ಗೆಳಯರೊಂದಿಗೆ ಕುಳಿತಿದ್ದ ಶ್ರೀಕಾಂತ್ ಹೆಮ್ಮಾಡಿಯವರ ಮೇಲೆ, ಡಾ.ಮಹೇಂದ್ರ ಕುಮಾರ್ ಶೆಟ್ಟಿಯವರು ನಡೆಸಿದ ದೈಹಿಕ ಹಲ್ಲೆಯನ್ನು ನಮ್ಮ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ.
ಪತ್ರಕರ್ತ ಶ್ರೀಕಾಂತ್ ಅವರು ಕುಂದಾಪುರ ಸರಕಾರಿ ಅಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದರ ಸಂಬಂಧ ಮಹೇಂದ್ರ ಕುಮಾರ್ ಶೆಟ್ಟಿ ಹಲ್ಲೆ ನಡೆಸಿರುವುದಾಗಿ ದೂರು ದಾಖಲಾಗಿದೆ. ಪತ್ರಕರ್ತರಾಗಿ ಶ್ರೀಕಾಂತ್ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿರುವ ಕಾರಣಕ್ಕೆ ಹಲ್ಲೆ ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ. ಭ್ರಷ್ಟಾಚಾರ ಆರೋಪದ ಸತ್ಯಾಸತ್ಯತೆಗಳು ತನಿಖೆ, ಸಾಕ್ಷಿ ಪುರಾವೆಗಳಿಂದ ಸಂವಿಧಾನಿಕ ಕಾನೂನಿನ ಅನ್ವಯ ನಿರ್ಧಾರವಾಗಬೇಕು. ಅದರ ಹೊರತಾಗಿ ಸುಶಿಕ್ಷಿತ ವೈದ್ಯ ವೃತ್ತಿಯಲ್ಲಿರುವ ವ್ಯಕ್ತಿಯು ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾಡಿರುವುದು ನಿಜಕ್ಕೂ ಖಂಡನಾರ್ಹ.
ಅಧಿಕಾರಸ್ತರನ್ನು ಎದಿರು ಹಾಕಿಕೊಂಡು ಭ್ರಷ್ಟಾಚಾರ ಬಯಲಿಗೆ ಎಳೆಯುವುದು ಪತ್ರಿಕಾ ಧರ್ಮ. ಶ್ರೀಕಾಂತ್ ಅವರು ಆ ಉತ್ತರದಾಯಿತ್ವವನ್ನು ನಿಭಾಯಿಸದ್ದಕ್ಕಾಗಿ ಈ ರೀತಿ ಹಲ್ಲೆಗೆ ಒಳಗಾಗುವುದು ಬರೀ ಪತ್ರಕರ್ತರಿಗೆ ಸಂಬಂಧಿಸಿದ ಸಂಗತಿಯಲ್ಲ. ಇದು ಅಧಿಕಾರ ಹೊಂದಿದವರು, ತಮ್ಮ ಅಧಿಕಾರ ಬಲದಿಂದ ಸಾಮಾನ್ಯ ಜನರನ್ನು ನ್ಯಾಯಕ್ಕೆ ಆಗ್ರಹಿಸದ ಹಾಗೆ ಆಟಾಟೋಪದಿಂದ ದಮನ ಮಾಡುವ ಪ್ರವೃತ್ತಿಯ ಪ್ರದರ್ಶನ. ಇದು ಕಾನೂನುಬದ್ಧ ನಾಗರಿಕ ಸಮಾಜದ ಶಾಂತಿಯುತ ಬದುಕಿಗೆ ಕೆಡಕು ಉಂಟು ಮಾಡುವ ವರ್ತನೆ.
ಶಾಂತಿ ಸೌಹಾರ್ದಯುತ ಸಮಾಜ ಜೀವನಕ್ಕಾಗಿ ದುಡಿಯುವ ನಮ್ಮ ವೇದಿಕೆಯು ಈ ಪ್ರಕರಣವನ್ನು ಗಂಭೀರವೆಂದು ಪರಿಗಣಿಸುತ್ತದೆ. ಯಾವ ಅಧಿಕಾರ ಒತ್ತಡಕ್ಕೂ ಮಣಿಯದೇ, ಹಲ್ಲೆ ನಡೆಸಿದ ಡಾ.ಮಹೇಂದ್ರ ಕುಮಾರ್ ಶೆಟ್ಟಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತದೆ.
ಸಂಚಾಲಕ ಸಮಿತಿ ಪರವಾಗಿ-
ಕೆ.ಫಣಿರಾಜ್, ಪ್ರಧಾನ ಸಂಚಾಲಕರು.




