Monday, November 2, 2026

ಪೆರ್ಡೂರು ಪ್ರದೀಪ್ ಪೂಜಾರಿ ಸಾವು – ಪೊಲೀಸ್ ಇಲಾಖೆಯ ಕರ್ತವ್ಯಲೋಪದ ವಿರುದ್ಧ ಬ್ರಹ್ಮಾವರ ಬಿಲ್ಲವ ಯುವ ವೇದಿಕೆ ತೀವ್ರ ಖಂಡನೆ

ಬ್ರಹ್ಮಾವರ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೆರ್ಡೂರು ಪ್ರದೀಪ್ ಪೂಜಾರಿ ಅವರ ಆತ್ಮಹತ್ಯೆ ಮನಕಲಕುವ ಹಾಗೂ ಅತ್ಯಂತ ನೋವಿನ ಸಂಗತಿಯಾಗಿದೆ. ಹಲ್ಲೆಗೊಳಗಾಗಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಯುವಕನಿಗೆ ಸೂಕ್ತ ಸ್ಪಂದನೆ ದೊರೆಯದೆ, ಕೊನೆಗೆ ಆತ್ಮಹತ್ಯೆಗೆ ಶರಣಾಗಿರುವುದು ವ್ಯವಸ್ಥೆಯ ಮಾನವೀಯತೆಯನ್ನೇ ಪ್ರಶ್ನಿಸುವಂತಿದೆ. ಈ ಘಟನೆಯನ್ನು ಬಿಲ್ಲವ ಯುವ ವೇದಿಕೆ ಬ್ರಹ್ಮಾವರ ತೀವ್ರವಾಗಿ ಖಂಡಿಸುತ್ತದೆ.

ಪ್ರದೀಪ್ ಪೂಜಾರಿ ಮೇಲೆ ಅಮಾನವೀಯವಾಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ. ಇಂತಹ ಸಂದರ್ಭದಲ್ಲಿ ಹಲ್ಲೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರು, ಹಲ್ಲೆಗೊಳಗಾದ ಯುವಕನ ದೂರಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿ ರಕ್ಷಣೆ ಮತ್ತು ನ್ಯಾಯ ಒದಗಿಸದೆ ಇರುವುದು ಅತ್ಯಂತ ವಿಷಾದನೀಯ.

ಹಲ್ಲೆಗೊಳಗಾಗಿ ದೂರು ನೀಡಲು ಬಂದ ವ್ಯಕ್ತಿಯ ಅಹವಾಲನ್ನು ಆಲಿಸಿ, ಕಾನೂನುಬದ್ಧವಾಗಿ ದೂರು ದಾಖಲಿಸಿ ತನಿಖೆ ನಡೆಸುವುದು ಪೊಲೀಸರ ಪ್ರಾಥಮಿಕ ಕರ್ತವ್ಯ. ಆದರೆ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ನಡೆ ಅನುಮಾನಕ್ಕೆ ಕಾರಣವಾಗಿದೆ. ರಾಜಕೀಯ ಪ್ರಭಾವ ಅಥವಾ ಒತ್ತಡಕ್ಕೆ ಮಣಿದು ಕರ್ತವ್ಯ ಲೋಪ ಎಸಗಲಾಗಿದೆಯೇ? ಎಂಬ ಅನುಮಾನಗಳಿಗೆ ನಿಷ್ಪಕ್ಷಪಾತ ತನಿಖೆಯ ಮೂಲಕ ಉತ್ತರ ದೊರೆಯಬೇಕಿದೆ.

ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತನ ದೂರನ್ನು ಸ್ವೀಕರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಹಾಗೂ ಕರ್ತವ್ಯ ಲೋಪ ಎಸಗಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಸೂಕ್ತ ತನಿಖೆ ನಡೆಸಬೇಕು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ಸಾವಿನ ಹಿಂದಿನ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಬೇಕು. ನ್ಯಾಯ ದೊರಕಿಸುವಲ್ಲಿ ವಿಳಂಬವಾದರೆ, ನ್ಯಾಯಕ್ಕಾಗಿ ಯುವ ಬಿಲ್ಲವ ಸಮುದಾಯದ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಮೃತ ಪ್ರದೀಪ್ ಪೂಜಾರಿ ಅವರ ಕುಟುಂಬಕ್ಕೆ ನ್ಯಾಯ ಮತ್ತು ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ರಾಜ್ಯ ಸರಕಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಅಧ್ಯಕ್ಷರಾದ ಸಚಿನ್ ಪೂಜಾರಿ ಹೇರೂರು, ಬಿಲ್ಲವ ಯುವ ವೇದಿಕೆ ಬ್ರಹ್ಮಾವರ ಆಗ್ರಹಿಸಿದ್ದಾರೆ.a

More like this
Related

ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಅಟ್ಟಳಿಕೆ ಮುಹೂರ್ತ

ಕಾರ್ಕಳ: ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಮಿತಿ (ರಿ.) ಆಶ್ರಯದಲ್ಲಿ...

ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ನವೀಕೃತ ಕಾರ್ಯಾಲಯ ಉದ್ಘಾಟನೆ

ಉಡುಪಿ: ಸಹಕಾರ ವ್ಯವಸ್ಥೆಯು ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ...

ಸ್ಟಿಂಗ್ ಪ್ರಕರಣ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದೆಹಲಿ ನಿವಾಸದಲ್ಲೇ ಫೋನ್ ಹಸ್ತಾಂತರ: ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ: ರಿಜ್ವಾನ್ ಅರ್ಷದ್

ಉಡುಪಿ: ಉಡುಪಿ ಜಿಲ್ಲೆಯನ್ನು ಅಭಿವೃದ್ಧಿಯ ಆಕಾಶಕ್ಕೆ ಏರಿಸುವುದು ನನ್ನ ಆಶಯವಾಗಿದ್ದು, ಕರಾವಳಿ...

Copying is disabled on Udupi Digital News.