Monday, November 2, 2026

ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ: ರಿಜ್ವಾನ್ ಅರ್ಷದ್

ಉಡುಪಿ: ಉಡುಪಿ ಜಿಲ್ಲೆಯನ್ನು ಅಭಿವೃದ್ಧಿಯ ಆಕಾಶಕ್ಕೆ ಏರಿಸುವುದು ನನ್ನ ಆಶಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಪ್ರವಾಸೋದ್ಯಮ, ಮೀನುಗಾರಿಕೆ, ಕೃಷಿ, ತೋಟಗಾರಿಕೆ ಹಾಗೂ ಯುವಜನರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.

ಅವರು ಭಾನುವಾರ ಉಡುಪಿಯ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ವಿವಿಧ ತಂಡಗಳಿಂದ ಗೌರವ ರಕ್ಷೆ ಸ್ವೀಕರಿಸಿ ಸಂದೇಶ ನೀಡಿದರು.

ಮೈಸೂರಿನ ಸಾಂಸ್ಕೃತಿಕ ಪರಿಸರದಲ್ಲಿ ಹುಟ್ಟಿ ಬೆಳೆದ ತಾನು, ಇದೀಗ ಕರಾವಳಿಯ ಸಾಂಸ್ಕೃತಿಕ ರಾಜಧಾನಿ ಹಾಗೂ ಶ್ರೀಕೃಷ್ಣನ ನೆಲೆವೀಡಾದ ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಕನ್ನಡಮ್ಮನ ಕೃಪೆ. ಕನ್ನಡ ಮತ್ತು ಕನ್ನಡಿಗರ ಋಣ ತೀರಿಸುವ ಅವಕಾಶ ಸಿಕ್ಕಿರುವುದಕ್ಕೆ ಸದಾ ಕೃತಜ್ಞನಾಗಿದ್ದೇನೆ ಎಂದರು.

ಭಾವೈಕ್ಯ, ಭ್ರಾತೃತ್ವ ಮತ್ತು ಸರ್ವಧರ್ಮ ಸಮಭಾವಕ್ಕೆ ಹೆಸರಾದ ಉಡುಪಿಯಲ್ಲಿ ಶ್ರೀಕೃಷ್ಣನ ಸಾನ್ನಿಧ್ಯ ಹಾಗೂ ಅಷ್ಟಮಠಗಳ ಯತಿ ಪರಂಪರೆಯ ನಡುವೆ ನಿಲ್ಲುವ ಅವಕಾಶ ದೊರೆತಿರುವುದು ಪುಣ್ಯದ ಸಂಗತಿ. ಜಾತಿ, ಮತ, ಪಂಥ ಹಾಗೂ ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸಬೇಕು ಎಂಬ ಮೌಲ್ಯಗಳನ್ನು ತಂದೆ-ತಾಯಿಯಿಂದ ಕಲಿತಿದ್ದೇನೆ. ಧರ್ಮ ಎನ್ನುವುದು ನಾಲ್ಕು ಗೋಡೆಗಳ ನಡುವಿನ ವಿಚಾರವಾಗಿರಬೇಕೇ ಹೊರತು ಬೀದಿಗೆ ಬರಬಾರದು. ಮನೆ, ಮಂದಿರ, ಮಸೀದಿ ಹಾಗೂ ಚರ್ಚುಗಳಿಂದ ಹೊರಬಂದಾಗ ನಾವೆಲ್ಲರೂ ಭಾರತೀಯರು ಮತ್ತು ಕನ್ನಡಿಗರು ಎಂಬ ಭಾವನೆ ಹೊಂದಿರಬೇಕು. ಮಾನವೀಯತೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಎಂಬ ನಂಬಿಕೆ ನನ್ನದು ಎಂದು ಹೇಳಿದರು.

ಕನ್ನಡದ ಆದಿಕವಿ ಪಂಪನ ‘ಮನುಜ ಕುಲಂ ತಾನೊಂದೇ ವಲಂ’ ಎಂಬ ಸಂದೇಶ ಎಲ್ಲರಿಗೂ ಪ್ರತಿದಿನದ ಪಾಠವಾಗಬೇಕು. ಮಧ್ವಾಚಾರ್ಯರು, ಸಂತ ಕನಕದಾಸರು ಹಾಗೂ ಕೇರಳದಿಂದ ಉಡುಪಿಗೆ ಆಗಮಿಸಿ ಸಮಾನತೆಯ ಸಂದೇಶ ಸಾರಿದ ನಾರಾಯಣ ಗುರುಗಳು ನಡೆದಾಡಿದ ಈ ನೆಲಕ್ಕೆ ವಿಶಿಷ್ಟ ಹಿರಿಮೆಯಿದೆ. ಧರ್ಮದ ಭೇದವಿಲ್ಲದೆ ಮಠ ಮತ್ತು ಮಸೀದಿಗಳನ್ನು ಸಮಾನ ಗೌರವದಿಂದ ಕಂಡು ದಾನಧರ್ಮದ ಪರಂಪರೆ ಬೆಳೆಸಿದ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಖಾಸಿಂ ಸಾಹೇಬ್ ಅವರ ಕೊಡುಗೆಯನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು.

ಕರ್ನಾಟಕದ ಎರಡು ಪ್ರಮುಖ ಚರ್ಚುಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ಬೆಂಗಳೂರಿನ ಶಿವಾಜಿನಗರದ ಸೇಂಟ್ ಮೇರೀಸ್ ಬೆಸಿಲಿಕಾ ಹಾಗೂ ಉಡುಪಿಯ ಅತ್ತೂರು ಚರ್ಚ್ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿವೆ ಎಂದು ಉಲ್ಲೇಖಿಸಿದರು.

ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರು ಮತ್ತು ಡಾ. ಯು.ಆರ್. ಅನಂತಮೂರ್ತಿ, ಕನ್ನಡದ ಶಬ್ದಭಂಡಾರಕ್ಕೆ ಅಪಾರ ಕೊಡುಗೆ ನೀಡಿದ ಪಾವೆಂ ಆಚಾರ್ಯರು, ಕಥೆಗಾರ ವ್ಯಾಸರಾಯ ಬಲ್ಲಾಳರು ಹಾಗೂ ಮಣಿಪಾಲವನ್ನು ಶಿಕ್ಷಣ ಕಾಶಿಯನ್ನಾಗಿ ರೂಪಿಸಿದ ಡಾ. ಟಿ.ಎಂ.ಎ. ಪೈ ಅವರನ್ನು ಸ್ಮರಿಸಿದರು. ತಮ್ಮ ಅದ್ಭುತ ಅಭಿನಯದಿಂದ ದೇಶದ ಗಮನ ಸೆಳೆದ ರಿಷಬ್ ಶೆಟ್ಟಿ ಕುಂದಾಪುರದವರಾಗಿದ್ದು, ಕನ್ನಡ ಚಿತ್ರರಂಗಕ್ಕೆ ಹೊಸ ಅಲೆ ನೀಡಿದ ರಕ್ಷಿತ್ ಶೆಟ್ಟಿ ಕೂಡ ಉಡುಪಿಯವರಾಗಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರು.

ಉಡುಪಿ ಬುದ್ಧಿವಂತರು ಮತ್ತು ಪ್ರಜ್ಞಾವಂತರ ನೆಲವಾಗಿದ್ದು, ಇಲ್ಲಿನ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಾಧನೆಯ ಫಲವಾಗಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯೆಂದು ಘೋಷಿಸಿರುವುದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.

ತ್ರಾಸಿ ಮತ್ತು ಮರವಂತೆ ಕಡಲತೀರಗಳಲ್ಲಿರುವ 7.07 ಎಕರೆ ಭೂಮಿಯನ್ನು ಬಳಸಿಕೊಂಡು ಸುಮಾರು 48 ಕೋಟಿ ರೂ. ವೆಚ್ಚದಲ್ಲಿ ರೆಸಾರ್ಟ್, ಮನರಂಜನಾ ಪಾರ್ಕ್ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಯೋಜನೆ ರೂಪಿಸಲಾಗಿದೆ. ಕಡಲು ಜಿಲ್ಲೆಯ ಪ್ರಮುಖ ಸಂಪತ್ತಾಗಿದ್ದು, ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಸರ್ಕಾರಿ ಮೀನುಗಾರಿಕಾ ಕಾಲೇಜಿನಲ್ಲಿ ‘ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆರೈನ್ ಟೆಕ್ನಾಲಜಿ ಆ್ಯಂಡ್ ಬ್ಲೂ ಎಕಾನಮಿ’ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಯನ್ನು 60ರಿಂದ 200ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳು, ಪ್ರಜಾಸೇವಾ ಇಲಾಖೆ, ಮೀನುಗಾರಿಕಾ ಸಂಪರ್ಕ ರಸ್ತೆಗಳ ನಿರ್ವಹಣೆ, ಯುವಜನರಿಗೆ ಅನುಕೂಲ ಕಲ್ಪಿಸುವ ಭಾರತ್ ಜೋಡೋ ಯುವ ಸಂಘಗಳು, ಗುಣಮಟ್ಟದ ಆರೋಗ್ಯ ಸೇವೆ, ಹವಾಮಾನ ಆಧಾರಿತ ಬೆಳೆ ವಿಮೆ, ಕೃಷಿ ಮತ್ತು ತೋಟಗಾರಿಕೆಗೆ ಪ್ರೋತ್ಸಾಹ ಹಾಗೂ ಜಿಲ್ಲೆಯ ಆರ್ಥಿಕ ಬೆನ್ನೆಲುಬಾಗಿರುವ ಮೀನುಗಾರಿಕೆಗೆ ಉತ್ತೇಜನ ನೀಡಲು ಆದ್ಯತೆ ನೀಡಲಾಗಿದೆ. ಕರಾವಳಿಗೆ ಆಗಮಿಸುವ ಪ್ರವಾಸಿಗರು ಮತ್ತು ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ‘ಕಲಾ ನಡಿಗೆ, ನಿಮ್ಮ ಬಳಿಗೆ’ ಎಂಬ ವಿನೂತನ ಯೋಜನೆಯ ಸಮರ್ಪಕ ಅನುಷ್ಠಾನಕ್ಕೂ ಒತ್ತು ನೀಡಲಾಗಿದೆ ಎಂದರು.

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯಿತಿಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಅಲ್ಲದೆ, ಉಡುಪಿ ಜಿಲ್ಲಾ ಪಂಚಾಯಿತಿಯೂ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಪಾತ್ರವಾಗಿರುವುದು ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದೆ. ಇದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ತುಳುನಾಡಿನ ಸಂಸ್ಕೃತಿಯೊಂದಿಗೆ ಗುರುತಿಸಿಕೊಂಡಿರುವ ಉಡುಪಿ, ಕನ್ನಡದ ಮಹಾನ್ ಪರಂಪರೆಗೆ ದೊಡ್ಡ ಕೊಡುಗೆ ನೀಡಿದೆ. ಇಂತಹ ಭವ್ಯ ಪರಂಪರೆಯ ನೆಲದಲ್ಲಿ ಜನರ ನಡುವೆ ವಿಷಬೀಜ ಬಿತ್ತುವ ಪ್ರಯತ್ನಗಳು ನಡೆಯುತ್ತಿರುವುದು ನೋವಿನ ಸಂಗತಿ. ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಜಾತಿ, ಮತ, ಪಂಥಗಳಿಗಿಂತ ನಾವೆಲ್ಲರೂ ಭಾರತೀಯರು ಮತ್ತು ಕನ್ನಡಿಗರು ಎಂಬ ಭಾವನೆ ಮುಖ್ಯವಾಗಬೇಕು. ಜಿಲ್ಲೆಯ ಪ್ರಜ್ಞಾವಂತ ಜನರಿಗೆ ಈ ವಿಚಾರವನ್ನು ಪ್ರತ್ಯೇಕವಾಗಿ ತಿಳಿಸುವ ಅಗತ್ಯವಿಲ್ಲ ಎಂದು ಹೇಳಿದರು.

‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’ ಎಂಬ ಆಶಯದೊಂದಿಗೆ ಎಲ್ಲರೂ ಕೈಜೋಡಿಸಿ ಮುನ್ನಡೆಯಬೇಕು. ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಯಾಗದೆ, ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಆಶಯದಂತೆ ನಿತ್ಯೋತ್ಸವವಾಗಬೇಕು ಎಂದು ಅವರು ತಮ್ಮ ರಾಜ್ಯೋತ್ಸವ ಸಂದೇಶದಲ್ಲಿ ಆಶಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿಕೆ, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹಾಗೂ ಇತರರು ಉಪಸ್ಥಿತರಿದ್ದರು.

More like this
Related

ಕುಂದಾಪುರ ಪತ್ರಕರ್ತನ ಮೇಲಿನ ಹಲ್ಲೆ ಪ್ರಕರಣ: ವೈದ್ಯರ ವರ್ಗಾವಣೆಗೆ ಆಗ್ರಹಿಸಿ ಉಸ್ತುವಾರಿ ಸಚಿವರಿಗೆ ಮನವಿ

ಉಡುಪಿ: ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ...

 ಉಡುಪಿ ಜಿಲ್ಲಾ ಆಸ್ಪತ್ರೆ ಶೀಘ್ರ ಕಾರ್ಯಾರಂಭಕ್ಕೆ ಕ್ರಮ: ಯು.ಟಿ. ಖಾದರ್

ಉಡುಪಿ: ನೂತನ ಉಡುಪಿ ಜಿಲ್ಲಾ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು,...

ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನ ಚರಿತ್ರೆ ಅನಾವರಣ 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಲೋಕಾರ್ಪಣೆ. ನವೆಂಬರ್ 2ರಂದು ಮುಂಬೈನಲ್ಲಿ...

ಎರಡು ದಿನಗಳಲ್ಲಿ ಎಎಪಿ ಮೂವರು ಶಾಸಕರ ರಾಜೀನಾಮೆ: ಪಕ್ಷ ತೊರೆದ ಕುನ್ವರ್ ವಿಜಯ್ ಪ್ರತಾಪ್ ಸಿಂಗ್

ಚಂಡೀಗಢ: ಪಂಜಾಬ್‌ನ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಮತ್ತೊಂದು ರಾಜಕೀಯ...

Copying is disabled on Udupi Digital News.