Sunday, November 1, 2026

ನ. 3ರಂದು ನೂತನ ಉಡುಪಿ ಜಿಲ್ಲಾಸ್ಪತ್ರೆ ಕುರಿತು ಬೆಂಗಳೂರಿನಲ್ಲಿ ಸಭೆ: ಸಚಿವ ರಿಜ್ವಾನ್ ಅರ್ಷದ್

ಉಡುಪಿ: ನೂತನ ಉಡುಪಿ ಜಿಲ್ಲಾಸ್ಪತ್ರೆಯ ಉದ್ಘಾಟನೆ ವಿಳಂಬವಾಗುತ್ತಿರುವ ಕುರಿತು ನವೆಂಬರ್ 3ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಈ ಸಂಬಂಧ ಈಗಾಗಲೇ ಆರೋಗ್ಯ ಸಚಿವರ ಸಮಯ ಕೋರಿದ್ದು, ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.

ಅವರು ಭಾನುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಆರೋಗ್ಯ ಸಚಿವರಿಗೆ ಜಿಲ್ಲಾಸ್ಪತ್ರೆ ಉದ್ಘಾಟನೆಯ ವಿಳಂಬದ ಬಗ್ಗೆ ಅರಿವಿದೆ. ಸಭೆಯಲ್ಲಿ ಈ ಕುರಿತು ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಉಡುಪಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರದ್ದುಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ಇಂತಹ ಕ್ರಮಗಳು ಜಾರಿಯಲ್ಲಿವೆ. ಈ ವಿಚಾರದಲ್ಲಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತಹ ಏಕರೂಪದ ನೀತಿ ರೂಪಿಸಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಗ್ಗೆ ಚರ್ಚೆ ನಡೆಸುತ್ತಿದೆ. ರಾಜ್ಯಾದ್ಯಂತ ಪ್ರಶಸ್ತಿ ನೀಡುವ ವ್ಯವಸ್ಥೆ ಹೇಗಿರಬೇಕು ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈ ವರ್ಷವೇ ಪ್ರಶಸ್ತಿ ಆಯ್ಕೆಗೆ ಮಾನದಂಡಗಳನ್ನು ರೂಪಿಸಿ, ಸಮಿತಿ ರಚಿಸುವ ಯೋಜನೆಯೂ ಇದೆ. ರಾಜಕೀಯ ಅಥವಾ ಯಾವುದೇ ರೀತಿಯ ಒತ್ತಡಕ್ಕೆ ಮಣಿದು ಪ್ರಶಸ್ತಿ ಆಯ್ಕೆ ನಡೆಯಬಾರದು. ಪ್ರಶಸ್ತಿಗೆ ತನ್ನದೇ ಆದ ಗೌರವ ಮತ್ತು ಘನತೆ ಇದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.
ಹಾಲಿನ ದರ ಏರಿಕೆ ಕುರಿತು ಮಾತನಾಡಿದ ಸಚಿವರು, ರೈತರ ಬೇಡಿಕೆ ಹಾಗೂ ಅವರ ಬದುಕಿನ ಬಗ್ಗೆ ಗಮನಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಬೆಲೆ ಕಡಿಮೆ ಇದೆ ಎಂದರು.

ಹಾಲಿನ ದರ ಹೆಚ್ಚಳ ಮಾಡದಿದ್ದರೆ ರೈತರು ಹಾಲನ್ನು ಹೊರರಾಜ್ಯಗಳಿಗೆ ರಫ್ತು ಮಾಡಲು ಮುಂದಾಗುವ ಪರಿಸ್ಥಿತಿ ಇತ್ತು. ಇದರಿಂದ ರಾಜ್ಯದಲ್ಲಿ ಹಾಲಿನ ಕೊರತೆ ಉಂಟಾಗುವ ಸಾಧ್ಯತೆಯ ಜೊತೆಗೆ ರೈತರಿಗೆ ಉತ್ತಮ ಬೆಲೆ ದೊರೆಯದಿರುವ ವಿಚಾರವನ್ನೂ ಪರಿಗಣಿಸಿ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಎಲ್ಲಿಯೂ ಈ ರೀತಿಯ ಹೇಳಿಕೆ ನೀಡಿಲ್ಲ ಎಂದರು.
ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ ಕುರಿತು ಮಾತನಾಡಿದ ಸಚಿವರು, ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದ್ದರೆ ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ವ್ಯವಸ್ಥೆ ಉಳಿಯುವುದು ಮುಖ್ಯ ಎಂದರು.

ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಆಡಳಿತ ಪಕ್ಷದ ಸಹಭಾಗಿಯಂತೆ ಅಥವಾ ಮೈತ್ರಿಕೂಟದ ಪಾಲುದಾರನಂತೆ ವರ್ತಿಸುವ ಪರಿಸ್ಥಿತಿ ಉಂಟಾದರೆ ಅದರ ವಿರುದ್ಧ ಧ್ವನಿ ಎತ್ತುವುದು ಎಲ್ಲರ ಕರ್ತವ್ಯವಾಗಿದೆ. ಇಂಡಿಯಾ ಮೈತ್ರಿಕೂಟ ಹಾಗೂ ಯುವಕರು ದೆಹಲಿಯಲ್ಲಿ ಬೃಹತ್ ಸಭೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಚುನಾವಣಾ ಆಯೋಗ ಜಾರಿಗೆ ತಂದಿರುವ ಎಸ್ಐಆರ್ ಪ್ರಕ್ರಿಯೆಯ ಉದ್ದೇಶವೇ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದಾಗಿದೆ ಎಂಬುದು ನಮ್ಮ ಆರೋಪ. ಈ ವಿಚಾರದ ವಿರುದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಸಚಿವರು ತಿಳಿಸಿದರು.

ನೆಚ್ಚಿನ ನಟರು ಕೋಮುವಾದಿಗಳಾಗಿದ್ದಾರೆ ಎಂಬ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಸಚಿವ ರಿಜ್ವಾನ್ ಅರ್ಷದ್, ತಾನು ಬಾಲಿವುಡ್ ನಟರ ಬಗ್ಗೆ ಮಾತನಾಡಿದ್ದೇನೆ ಹೊರತು ಕರ್ನಾಟಕದ ನಟರ ಬಗ್ಗೆ ಅಲ್ಲ ಎಂದರು.

ರಾಜ್ಯದ ನಟರು ಕೋಮುವಾದಿಗಳಲ್ಲ. ಬಾಲಿವುಡ್ನ ಹಲವು ನಟರು ಕೋಮುವಾದಿ ಧೋರಣೆಯಲ್ಲಿ ವರ್ತಿಸಿರುವುದಲ್ಲದೆ, ಅಂತಹ ವಿಚಾರಗಳನ್ನು ಬಿಂಬಿಸುವ ಸಿನಿಮಾಗಳನ್ನೂ ಮಾಡಿದ್ದಾರೆ. ಈ ಕುರಿತು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

More like this
Related

ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ನವೀಕೃತ ಕಾರ್ಯಾಲಯ ಉದ್ಘಾಟನೆ

ಉಡುಪಿ: ಸಹಕಾರ ವ್ಯವಸ್ಥೆಯು ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ...

ಸ್ಟಿಂಗ್ ಪ್ರಕರಣ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದೆಹಲಿ ನಿವಾಸದಲ್ಲೇ ಫೋನ್ ಹಸ್ತಾಂತರ: ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ: ರಿಜ್ವಾನ್ ಅರ್ಷದ್

ಉಡುಪಿ: ಉಡುಪಿ ಜಿಲ್ಲೆಯನ್ನು ಅಭಿವೃದ್ಧಿಯ ಆಕಾಶಕ್ಕೆ ಏರಿಸುವುದು ನನ್ನ ಆಶಯವಾಗಿದ್ದು, ಕರಾವಳಿ...

ಶಿಕ್ಷಣದಿಂದ ಜೀವನ ಮತ್ತು ಸಮಾಜದಲ್ಲಿ ಪರಿವರ್ತನೆ ಸಾಧ್ಯ – ವೆರೋನಿಕಾ ಕರ್ನೆಲಿಯೋ

ಉಡುಪಿ: ಶಿಕ್ಷಣವು ಕೇವಲ ಅಕ್ಷರಾಭ್ಯಾಸ ಅಥವಾ ಪದವಿ ಪಡೆಯುವುದಲ್ಲ, ಅದು ಮನುಷ್ಯನ...

Copying is disabled on Udupi Digital News.