ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದಲ್ಲಿ ಬಟ್ಟೆ ಒಗೆಯಲು ಕೆರೆಗೆ ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಮೃತ ಬಾಲಕಿಯರನ್ನು ಸಮೀಪದ ಸರ್ಕಾರಿ ಶಾಲೆಯ ಏಳನೇ ತರಗತಿಯಲ್ಲಿ ಓದುತ್ತಿದ್ದ ವೈಶಾಲಿ ಮತ್ತು ಸುನಿತಾ ಎಂದು ಗುರುತಿಸಲಾಗಿದೆ. ಇವರು ಮುಳ್ಳಿಕಟ್ಟೆ ಹೆದ್ದಾರಿ ಪಕ್ಕದ ಜೋಪಡಿಯಲ್ಲಿ ವಾಸವಾಗಿದ್ದು, ಮೂಲತಃ ಹಾವೇರಿ ಜಿಲ್ಲೆಯವರು ಎಂದು ತಿಳಿದುಬಂದಿದೆ.
ಬಾಲಕಿಯರು ಬಟ್ಟೆ ಒಗೆಯಲು ಕೆರೆಗೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು, ಕುಂದಾಪುರ ಅಗ್ನಿಶಾಮಕ ದಳ ಹಾಗೂ ತುರ್ತು ರಕ್ಷಣಾ ತಂಡಗಳು ಧಾವಿಸಿ ಕಾರ್ಯಾಚರಣೆ ನಡೆಸಿದವು. ಕೆರೆಗೆ ತಲುಪಲು ಆಂಬುಲೆನ್ಸ್, ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರ ತಂಡಗಳು ಹರಸಾಹಸ ಪಡಬೇಕಾಯಿತು. ದಿನೇಶ್ ಖಾರ್ವಿ ಅವರ ತಂಡ, ಟೀಮ್ ಎಚ್ಐ ತುರ್ತು ಸ್ಪಂದನಾ ತಂಡ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿದರು. ದಿನೇಶ್ ಕಾರ್ವಿ ಅವರು ಇಬ್ಬರು ಬಾಲಕಿಯರ ಮೃತದೇಹಗಳನ್ನು ನೀರಿನಿಂದ ಹೊರತೆಗೆದರು.
ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದ ಶೀತಲೀಕರಣ ಘಟಕಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಪೋಷಕರು, ಕುಟುಂಬಸ್ಥರು ಹಾಗೂ ಸ್ಥಳೀಯರ ಆಕ್ರಂದನ ಮುಗಿಲುಮುಟ್ಟಿತ್ತು.




