ಉಡುಪಿ: ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿ, ಕಂತಿನ ಹಣ ಬಾಕಿ ಉಳಿದಾಗ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಮಂಗಳೂರಿನ ಸಾನಿಧ್ಯ ಫೈನಾನ್ಸ್‌ಗೆ ಸಂಬಂಧಿಸಿದ ಮೂವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲ್ ಪರಿಸರದಲ್ಲಿ ಸಾನಿಧ್ಯ ಫೈನಾನ್ಸ್‌ನವರು ಅಧಿಕ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದರು. ಸಾಲದ ಕಂತಿನ ಹಣ ಬಾಕಿ ಉಳಿದ ಸಂದರ್ಭದಲ್ಲಿ ಸಾರ್ವಜನಿಕರನ್ನು ಪೀಡಿಸುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಅಧಿಕ ಬಡ್ಡಿ ದರದ ಸಾಲದ ವಿಚಾರಕ್ಕೆ ಸಂಬಂಧಿಸಿ ಕುಂಜಾಲಿನ ಗಣೇಶ್ ಗಾಣಿಗ ಎಂಬವರ KA-03-HF-8253 ನೋಂದಣಿ ಸಂಖ್ಯೆಯ ಮೋಟಾರು ಸೈಕಲ್‌ನ್ನು ಬಲವಂತವಾಗಿ ತೆಗೆದುಕೊಂಡು ಹೋಗಿ, ಜಾಮೀನುದಾರ ರಾಜೇಶ್ ನಾಯ್ಕ ಅವರಿಗೆ ಹಲ್ಲೆ ನಡೆಸಲಾಗಿದೆ ಎಂಬ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೇಶ್ ನಾಯ್ಕ ನೀಡಿದ ದೂರಿನ ಆಧಾರದ ಮೇಲೆ ಅಪರಾಧ ಕ್ರಮಾಂಕ 144/2026ರಲ್ಲಿ BNS ಕಲಂ 137(2), 115(2), 118(2), 308, 351(2), 352 ಹಾಗೂ ಕಲಂ 190ರ ಜೊತೆಗೆ ಕರ್ನಾಟಕ ಅಧಿಕ ಬಡ್ಡಿ ವಿಧಿಸುವುದನ್ನು ನಿಷೇಧಿಸುವ ಕಾಯ್ದೆ 2004ರ ಕಲಂ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದ್ದು, ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಶೋಕ ಮಾಳಾಬಗಿ ಅವರು ಕ್ರೈಂ ಸಿಬ್ಬಂದಿ ಕಿರಣ್ ಹಾಗೂ ಸಿದ್ದಪ್ಪ ಸಕೆನಳ್ಳಿ ಅವರೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಕರಣದ ಆರೋಪಿಗಳಾದ ಮಂಗಳೂರು ಕುಲಾಯಿ ನಿವಾಸಿ ಸಂದೀಪ್ ಶೆಟ್ಟಿ ಹಾಗೂ ಕಾವೂರು ನಿವಾಸಿ ವಿಜೀತ್ ಶೆಟ್ಟಿ ಅವರನ್ನು ಆ.6ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೋರ್ವ ಆರೋಪಿ ಮಂಗಳೂರು ಬಜ್ಪೆ-ಮಳವೂರು ನಿವಾಸಿ ಸಂಪತ್ ಎಂಬಾತನನ್ನು ಆ.13ರಂದು ಬಂಧಿಸಲಾಗಿದೆ.
ಆರೋಪಿಗಳು ಬಲವಂತವಾಗಿ ತೆಗೆದುಕೊಂಡು ಹೋಗಿದ್ದ ಮೋಟಾರು ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ತನಿಖೆಯ ಸಂದರ್ಭದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.




