ಟೆಹರಾನ್: ಒಮಾನ್ ಕರಾವಳಿಯ ಹಾರ್ಮುಝ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಹಡಗೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಯುನೈಟೆಡ್ ಕಿಂಗ್ ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಉಲ್ಲೇಖಿಸಿ Aljazeera ವರದಿ ಮಾಡಿದೆ.
ಒಮಾನ್ ನ ಖಾಸಬ್ ನಿಂದ ಈಶಾನ್ಯಕ್ಕೆ ಸುಮಾರು 25 ನಾಟಿಕಲ್ ಮೈಲು ದೂರದಲ್ಲಿ ಘಟನೆ ಸಂಭವಿಸಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಹೊರಹೋಗುತ್ತಿದ್ದ ವೇಳೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಮೂಲವೊಂದು ಮಾಹಿತಿ ನೀಡಿದೆ ಎಂದು ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿನ ತನ್ನ ಖಾತೆಯಲ್ಲಿ UKMTO ಪ್ರಕಟಿಸಿರುವ ಎಚ್ಚರಿಕೆಯಲ್ಲಿ ತಿಳಿಸಿದೆ.
ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಹಡಗಿನಲ್ಲಿದ್ದ ಸಿಬ್ಬಂದಿಯ ಸ್ಥಿತಿ, ಹಡಗಿಗೆ ಉಂಟಾಗಿರುವ ಹಾನಿಯ ಪ್ರಮಾಣ ಹಾಗೂ ಘಟನೆಯಿಂದ ಸಮುದ್ರ ಪರಿಸರದ ಮೇಲಾಗಿರುವ ಸಂಭಾವ್ಯ ಪರಿಣಾಮದ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.
ಘಟನೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾರ್ಮುಝ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳು ಎಚ್ಚರಿಕೆಯಿಂದ ಸಾಗಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ವರದಿ ಮಾಡಬೇಕು ಎಂದು UKMTO ಸೂಚಿಸಿದೆ.




