Friday, October 30, 2026

ರಸಗೊಬ್ಬರ ಬೆಲೆ ಏರಿಕೆಯ ಹೊರೆ ರೈತರ ಮೇಲೆ ಬೀಳದಂತೆ ₹16 ಲಕ್ಷ ಕೋಟಿ ಸಬ್ಸಿಡಿ ನೀಡಲಾಗಿದೆ: ಪ್ರಧಾನಿ ಮೋದಿ

ಭಿಲ್ಡಿ (ಗುಜರಾತ್): ಜಾಗತಿಕ ಅನಿಶ್ಚಿತತೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ, ಅದರ ಹೊರೆ ರೈತರ ಮೇಲೆ ಬೀಳದಂತೆ ಕೇಂದ್ರ ಸರ್ಕಾರ ಕಳೆದ ಕೆಲವು ವರ್ಷಗಳಲ್ಲಿ ಸುಮಾರು ₹16 ಲಕ್ಷ ಕೋಟಿ ರಸಗೊಬ್ಬರ ಸಬ್ಸಿಡಿ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಗುಜರಾತ್‌ನ ಬನಸ್ಕಾಂಠ ಜಿಲ್ಲೆಯ ಭಿಲ್ಡಿಯಲ್ಲಿ ಶುಕ್ರವಾರ ನಡೆದ ರೈತರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಂತರರಾಷ್ಟ್ರೀಯ ಬೆಳವಣಿಗೆಗಳಿಂದ ರಸಗೊಬ್ಬರಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಆದರೆ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಾನೇ ಭರಿಸಿದ್ದು, ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ದೊರೆಯುವಂತೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ರೈತರ ಕಲ್ಯಾಣಕ್ಕಾಗಿ ಕೃಷಿ ಕ್ಷೇತ್ರಕ್ಕೆ ನೀಡಲಾಗುತ್ತಿರುವ ಅನುದಾನವನ್ನು ವಿವರಿಸಿದ ಅವರು, 2013-14ನೇ ಸಾಲಿಗೆ ಹೋಲಿಸಿದರೆ ಕೃಷಿ ಬಜೆಟ್ ಐದು ಪಟ್ಟು ಹೆಚ್ಚಾಗಿದೆ. ವಿವಿಧ ಸರ್ಕಾರಿ ಯೋಜನೆಗಳು ಹಾಗೂ ನಿರ್ಧಾರಗಳ ಮೂಲಕ ರೈತರಿಗೆ ₹50 ಲಕ್ಷ ಕೋಟಿಗೂ ಅಧಿಕ ಮೊತ್ತದ ಪ್ರಯೋಜನ ದೊರೆತಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್), ರಸಗೊಬ್ಬರ ಸಬ್ಸಿಡಿ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಬೆಳೆ ವಿಮೆ ಹಾಗೂ ಸೌರಶಕ್ತಿ ಆಧಾರಿತ ನೀರಾವರಿ ಯೋಜನೆಗಳು ರೈತರಿಗೆ ನೆರವಾಗುತ್ತಿವೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಎಂಎಸ್‌ಪಿ ವಿಚಾರದಲ್ಲಿ ರೈತರಿಗೆ ಭರವಸೆಗಳನ್ನು ನೀಡಲಾಗುತ್ತಿತ್ತು. ಆದರೆ ತಮ್ಮ ಸರ್ಕಾರ ಆ ಭರವಸೆಯನ್ನು ಈಡೇರಿಸಿದ್ದು, ಕಳೆದ 12 ವರ್ಷಗಳಲ್ಲಿ ಗೋಧಿ ಮತ್ತು ಭತ್ತ ಬೆಳೆಗಾರರಿಗೆ ಎಂಎಸ್‌ಪಿ ರೂಪದಲ್ಲಿ ₹24 ಲಕ್ಷ ಕೋಟಿ ಪಾವತಿಸಲಾಗಿದೆ ಎಂದು ಮೋದಿ ಹೇಳಿದರು.

ಇದೇ ವೇಳೆ, ಕಳೆದ 10ರಿಂದ 12 ವರ್ಷಗಳಲ್ಲಿ ಬೆಳೆ ವಿಮೆ ಪರಿಹಾರದ ರೂಪದಲ್ಲಿ ರೈತರಿಗೆ ₹2 ಲಕ್ಷ ಕೋಟಿಗೂ ಅಧಿಕ ಮೊತ್ತ ಪಾವತಿಸಲಾಗಿದೆ. ಪಿಎಂ-ಕುಸುಮ್ ಯೋಜನೆಯಡಿ ಸುಮಾರು 12 ಲಕ್ಷ ಸೌರ ಪಂಪ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಿಂದ ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿದ್ದು, ಬನಸ್ಕಾಂಠ ಮತ್ತು ಏಕ್ತಾ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬನಸ್ಕಾಂಠದಲ್ಲಿ ಭಾರತ್ ಬೋವೈನ್ ಬ್ರೀಡಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ (BBBRC) ಉದ್ಘಾಟಿಸಿದ ಅವರು, ಕೃಷಿ, ಪಶುಸಂಗೋಪನೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.

More like this
Related

ಅಂಡರ್-19 ಏಷ್ಯಾಕಪ್‌ಗೆ ಭಾರತದ ತಂಡ ಪ್ರಕಟ: ಸೆಹ್ವಾಗ್ ಪುತ್ರ ಆರ್ಯವೀರ್, ದ್ರಾವಿಡ್ ಪುತ್ರ ಅನ್ವಯ್‌ಗೆ ಸ್ಥಾನ

ನವದೆಹಲಿ: ಒಮಾನ್‌ನ ಮಸ್ಕತ್‌ನಲ್ಲಿ ನವೆಂಬರ್ 5ರಿಂದ 14ರವರೆಗೆ ನಡೆಯಲಿರುವ ಎಸಿಸಿ ಪುರುಷರ...

ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಅರ್ಷದೀಪ್ ಸಿಂಗ್: 150 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಎಡಗೈ ವೇಗಿ...

ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್: ಎರಡು ವಾರಗಳಲ್ಲಿ ಶೋಕಾಸ್ ನೋಟಿಸ್‌ಗಳ ಬಗ್ಗೆ ನಿರ್ಧಾರ ಕೈಗೊಳ್ಳಲು WFIಗೆ ದೆಹಲಿ ಹೈಕೋರ್ಟ್ ಸೂಚನೆ

ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಸಂಬಂಧಿಸಿದ ಶೋಕಾಸ್ ನೋಟಿಸ್‌ಗಳ ಕುರಿತು...

ನ. 15ರೊಳಗೆ ಉಡುಪಿ ಜಿಲ್ಲಾಸ್ಪತ್ರೆ ಲೋಕಾರ್ಪಣೆ ದಿನಾಂಕ ಪ್ರಕಟಿಸಿ: ಆರೋಗ್ಯ ಸಚಿವರಿಗೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ

ಉಡುಪಿ: ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ನೂತನ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣ...

Copying is disabled on Udupi Digital News.