Monday, September 14, 2026

ಹಾಸನ | ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ

ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಹೊರವಲಯದ ಗುಡ್ಡೇನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಸಕಲೇಶಪುರ ತಾಲೂಕಿನ ನಾಡಹಳ್ಳಿ ಗ್ರಾಮದ ಮದನ್ ಎಂದು ಗುರುತಿಸಲಾಗಿದೆ. ಹಾಸನದಲ್ಲಿ ದ್ವಿತೀಯ ವರ್ಷದ ಪ್ಯಾರಾಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಮದನ್, ಗುಡ್ಡೇನಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ವಾಸವಾಗಿದ್ದರು.

ಮದನ್ ರಿಗೆ ಹಾಸ್ಟೆಲ್ ನ ಹೊರಗೆ ಪರಿಚಯವಾಗಿದ್ದ ಪವನ್, ಪ್ರೀತಂ ಹಾಗೂ ಇಬ್ಬರು ಅಪ್ರಾಪ್ತ ವಯಸ್ಸಿನವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಚಾರವನ್ನು ಮದನ್ ತನ್ನ ತಾಯಿ ಶೋಭಾ ಅವರ ಗಮನಕ್ಕೆ ತಂದಿದ್ದರು. ಬಳಿಕ ತಾಯಿಯ ಸಲಹೆಯಂತೆ ಆ ನಾಲ್ವರ ಜೊತೆಗಿನ ಸಂಪರ್ಕವನ್ನು ಕಡಿತಗೊಳಿಸಿದ್ದರು ಎನ್ನಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮದನ್ ಮೇಲೆ ನಾಲ್ವರು ಹಲ್ಲೆ ನಡೆಸಿ, ಅವರ ಮೊಬೈಲ್ ಫೋನ್ ಗೂ ಹಾನಿ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದಿದ್ದ ಮದನ್ ಕೆಲಕಾಲ ಹಾಸ್ಟೆಲ್ ತೊರೆದು ಮನೆಗೆ ಮರಳಿದ್ದರು. ಸುಮಾರು ಮೂರು ತಿಂಗಳ ಬಳಿಕ ಮತ್ತೆ ಹಾಸ್ಟೆಲ್ ಗೆ ತೆರಳಿದ್ದರು ಎನ್ನಲಾಗಿದೆ.

ರವಿವಾರ ರಾತ್ರಿ ಹಾಸ್ಟೆಲ್ ಎದುರಿನ ಬೇಕರಿಯೊಂದರಲ್ಲಿ ಮದನ್ ಟೀ ಕುಡಿಯುತ್ತಿದ್ದ ವೇಳೆ ಆರೋಪಿತ ನಾಲ್ವರು ಅಲ್ಲಿಗೆ ಬಂದು ಹಣ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವೇಳೆ ಮದನ್ ತಮ್ಮ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಾಯಿ ಹಣ ಕಳುಹಿಸಿದ್ದರು ಎನ್ನಲಾಗಿದೆ. ಬಳಿಕ ಪವನ್ ಎಂಬಾತ ಶೋಭಾರಿಗೆ ಕರೆ ಮಾಡಿ ಬೆದರಿಕೆಯ ರೀತಿಯಲ್ಲಿ ಮಾತನಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಇದರಿಂದ ಆತಂಕಗೊಂಡ ಶೋಭಾ ಮಧ್ಯರಾತ್ರಿಯೇ ನಾಡಹಳ್ಳಿಯಿಂದ ಹಾಸನಕ್ಕೆ ಬಂದು ಹಾಸ್ಟೆಲ್ನಲ್ಲಿ ಮದನ್ ಗಾಗಿ ಹುಡುಕಾಡಿದರೂ ಅವರು ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ಹಾಸ್ಟೆಲ್ ಮೇಲ್ಛಾವಣಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಆತ್ಮಹತ್ಯೆಗೂ ಮುನ್ನ ಮದನ್ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಪವನ್, ಪ್ರೀತಂ ಹಾಗೂ ಇಬ್ಬರು ಅಪ್ರಾಪ್ತ ವಯಸ್ಕರು ಕಾರಣ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ತಮ್ಮ ಮೇಲೆ ಹಲ್ಲೆ ನಡೆಸಿ ಮೊಬೈಲ್ ಒಡೆದಿರುವ ಬಗ್ಗೆಯೂ ಉಲ್ಲೇಖಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.