ಉಡುಪಿಯಲ್ಲಿ ‘ಊರೂರು ಜಂತರ್ ಮಂತರ್’ ತಿರಂಗ ನಡಿಗೆ ಮತ್ತು ಪ್ರತಿಭಟನೆ
ಉಡುಪಿ: ಬ್ರಿಟಿಷರ ಕಾಲದಲ್ಲಿ ಮತದಾನದ ಹಕ್ಕು ಶ್ರೀಮಂತರು, ಪುರುಷರು ಹಾಗೂ ಬಲಾಢ್ಯರಿಗೆ ಮಾತ್ರ ಸೀಮಿತವಾಗಿತ್ತು. ಇಂದು ಪ್ರಧಾನಿ ನರೇಂದ್ರ ಮೋದಿ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಭವ್ಯ ನರಸಿಂಹಮೂರ್ತಿ ಆರೋಪಿಸಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ, ಸಹಬಾಳ್ವೆ ಸಂಘಟನೆ ಹಾಗೂ ವಿವಿಧ ಸಮಾನಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಉಡುಪಿಯಲ್ಲಿ ನಡೆದ ‘ಊರೂರು ಜಂತರ್ ಮಂತರ್’ ಬೃಹತ್ ತಿರಂಗ ನಡಿಗೆ ಮತ್ತು ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
2014ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಾ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದ ಅವರು, ರೈತರ ಆದಾಯವನ್ನು ದ್ವಿಗುಣಗೊಳಿಸುವ ಹಾಗೂ ಯುವಕ-ಯುವತಿಯರಿಗೆ ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವ ಭರವಸೆಗಳನ್ನು ಈಡೇರಿಸಿಲ್ಲ ಎಂದು ಟೀಕಿಸಿದರು. ಚುನಾವಣೆಯಲ್ಲಿ ಸೋಲುವ ಭೀತಿ ಎದುರಾದಾಗ ಚುನಾವಣಾ ಆಯೋಗವನ್ನು ತಮ್ಮ ಪರವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಹಿಂದೆ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ನ್ಯಾಯಾಂಗದ ಪ್ರತಿನಿಧಿಗಳು ಭಾಗವಹಿಸುತ್ತಿದ್ದರು. ಆದರೆ, ಈಗ ಆಡಳಿತ ಪಕ್ಷ ತನ್ನ ಬಹುಮತದ ಆಧಾರದಲ್ಲಿ ಆಯುಕ್ತರನ್ನು ಆಯ್ಕೆ ಮಾಡುತ್ತಿದೆ. ಇಂತಹ ವ್ಯವಸ್ಥೆಯಲ್ಲಿ ಚುನಾವಣಾ ಪಾರದರ್ಶಕತೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. 2019ರಲ್ಲಿ ಸುಳ್ಳು ಆರೋಪಗಳ ಮೂಲಕ ಗೆಲ್ಲಲು ಸಾಧ್ಯವಾಗದಿದ್ದಾಗ ಜಾರಿ ನಿರ್ದೇಶನಾಲಯ (ED), ಆದಾಯ ತೆರಿಗೆ ಇಲಾಖೆ (IT) ಬಳಕೆ ಹಾಗೂ ಕುದುರೆ ವ್ಯಾಪಾರದ ಮೂಲಕ ಅಧಿಕಾರ ಪಡೆಯಲಾಗಿದೆ ಎಂದು ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ಕಾರ್ಯವೈಖರಿಯನ್ನೂ ಅವರು ಪ್ರಶ್ನಿಸಿದರು. ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ಹಿಂದೆ ನಡೆದ ದಬ್ಬಾಳಿಕೆಗಳಿಗೆ ಇಂದಿನ ಯುವಪೀಳಿಗೆ ಪ್ರಜಾಸತ್ತಾತ್ಮಕವಾಗಿ ಪ್ರತಿಕ್ರಿಯಿಸುತ್ತಿದೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ದೇಶದ 13 ಕೋಟಿ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಕಲಾಪಗಳಿಗೆ ಹಾಜರಾಗದೆ ದೂರ ಉಳಿದಿದ್ದಾರೆ ಎಂದು ಟೀಕಿಸಿದ ಅವರು, ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಲಕ್ಷಾಂತರ ನಾಗರಿಕರ ಮತದಾನದ ಹಕ್ಕಿಗೆ ಧಕ್ಕೆಯಾಗುವ ಆತಂಕವಿದೆ ಎಂದರು.
ತಕ್ಷಣವೇ SIR ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಹಬಾಳ್ವೆ ಸಂಘಟನೆಯ ಫಣಿರಾಜ್, ಸುಂದರ್ ಮಾಸ್ಟರ್, ರಮೇಶ್ ಕಾಂಚನ್, ಪ್ರಸಾದ್ ರಾಜ್ ಕಾಂಚನ್, ಹರಿಪ್ರಸಾದ್ ರೈ, ಫಾ. ಡೆನಿಸ್ ಡೆಸಾ, ಫಾ. ಚಾರ್ಲ್ಸ್ ಮಿನೇಜಸ್, ಇಸ್ಮಾಯಿಲ್ ಕೊಡಿಬೆಂಗ್ರೆ, ಪ್ರಶಾಂತ್ ಜತ್ತನ್ನ, ಮೆಲ್ವಿನ್ ಆರಾನ್ಹಾ, ವೆರೋನಿಕಾ ಕರ್ನೆಲಿಯೊ, ನಾಗೇಶ್ ಕುಮಾರ್ ಉದ್ಯಾವರ್ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.




