Monday, September 14, 2026

ಕಾರ್ಮಿಕರ ಹಕ್ಕುಗಳಿಗಾಗಿ ಒತ್ತಾಯಿಸಿ ಜೆಸಿಟಿಯುನಿಂದ ಜೈಲ್ ಭರೋ: ಧರಣಿ ನಿರತರ ಬಂಧನ

ಉಡುಪಿ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಕೂಲಿಕಾರರ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನಗರದ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬಳಿಕ ರಸ್ತೆ ತಡೆ ನಡೆಸಿದ ರೈತ–ಕಾರ್ಮಿಕ–ಕೂಲಿಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರನ್ನು ಗುಲಾಮಗಿರಿಯತ್ತ ತಳ್ಳುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾರ್ಮಿಕ ವರ್ಗವನ್ನು ಬಲಿಕೊಟ್ಟು ಬಂಡವಾಳಶಾಹಿಗಳ ಸೂಪರ್ ಲಾಭಕ್ಕೆ ಅವಕಾಶ ಮಾಡಿಕೊಡುವ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ದೇಶದ ಯುವಜನರನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿಯ ಮೂಲಕ ಶೋಷಿಸುವ ನೀತಿಗಳು ಮುಂದೊಂದು ದಿನ ಜೆನ್-ಝಡ್ ಯುವಜನರ ಹೋರಾಟದ ಮಾದರಿಯಲ್ಲಿ ಬೃಹತ್ ಪ್ರತಿಭಟನೆಯಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಗಳು ತಿಂಗಳುಗಟ್ಟಲೆ ವೇತನ ಬಾಕಿ ಉಳಿಸಿಕೊಂಡಿದ್ದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಗ್ರಂಥಾಲಯಗಳ ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನ ನೀಡದಿರುವುದು ಖಂಡನೀಯ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಎಡಪಕ್ಷಗಳ ಒತ್ತಾಯ ಹಾಗೂ ಬೆಂಬಲದ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಆದಾಯ ಹೆಚ್ಚಿಸಲು ಜಾರಿಗೊಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಗೆ ಬದಲಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿಬಿಜಿ ಗ್ರಾಮ್ ಜಿ ಯೋಜನೆಗೆ ಸಮರ್ಪಕ ಅನುದಾನ ನೀಡದೆ ಗ್ರಾಮೀಣ ಬಡವರ ಹಕ್ಕುಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ರೈತರು, ಕಾರ್ಮಿಕರು ಹಾಗೂ ಕೂಲಿಕಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ, 1942ರ ಆಗಸ್ಟ್ 8ರಂದು ಬ್ರಿಟಿಷರ ವಿರುದ್ಧ ಮೊಳಗಿದ “ಕ್ವಿಟ್ ಇಂಡಿಯಾ” ಚಳವಳಿಯ ಸ್ಫೂರ್ತಿಯಲ್ಲಿ, ಕಾರ್ಪೊರೇಟ್ ಕಂಪೆನಿಗಳ ಜನವಿರೋಧಿ ನೀತಿಗಳ ವಿರುದ್ಧ “ಕಾರ್ಪೊರೇಟ್ ಕಂಪೆನಿಗಳೇ ದೇಶ ಬಿಟ್ಟು ತೊಲಗಿ” ಎಂಬ ಘೋಷಣೆಯೊಂದಿಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಬೀಡಿ, ಕಟ್ಟಡ ಹಾಗೂ ಕಾರ್ಖಾನೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಸೈಯ್ಯದ್ ಅಲಿ, ರೈತರಿಗೆ ಬೆಂಬಲ ಬೆಲೆ ಖಾತರಿಪಡಿಸಬೇಕು ಹಾಗೂ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸುಭಾಶ್ಚಂದ್ರ ನಾಯಕ್, ಉಮೇಶ್ ಕುಂದರ್, ಸುನೀತಾ ಶೆಟ್ಟಿ, ನಳಿನಿ, ನಾಗರಾಜ್ ಕಾಂಚನ್, ಸರೋಜ, ಪ್ರಭಾಕರ್ ಕುಂದರ್, ಮೋಹನಚಂದ್ರ, ನಾಗೇಶ್, ರಮೇಶ್, ವಾಮನ ಪೂಜಾರಿ, ಮುರುಳಿ, ರಂಗನಾಥ್ ಸಾರಿಕ್, ಶಾರದಾ, ಶರ್ಮಿಳಾ ಸೇರಿದಂತೆ ರೈತ–ಕಾರ್ಮಿಕ–ಕೂಲಿಕಾರರು ಭಾಗವಹಿಸಿದ್ದರು.

ಅಂಚೆ ಕಚೇರಿ ಎದುರಿನಿಂದ ರಸ್ತೆ ತಡೆಗೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಬಂಧಿಸಿದರು. ಬಳಿಕ ಬಂಧಿತರೆಲ್ಲರನ್ನು ಬಿಡುಗಡೆ ಮಾಡಲಾಯಿತು.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

Copying is disabled on Udupi Digital News.