ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಸಂಭವಿಸಿದ ಭೀಕರ ಘಟನೆಯಲ್ಲಿ ಕೋವಿಯಿಂದ ಗುಂಡು ತಗುಲಿ ಬಾಲಕನೊಬ್ಬ ಮೃತಪಟ್ಟಿದ್ದು, ಆತನ ತಂದೆ ಚೂರಿ ಇರಿತದಿಂದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಗ್ರಾಮದಲ್ಲಿ ಆತಂಕ ಮೂಡಿಸಿದೆ.
ಮೃತ ಬಾಲಕನನ್ನು ರಾಮಕುಂಜ ನಿವಾಸಿ ವಸಂತ್ ಅಮೀನ್ ಅವರ ಪುತ್ರ ಮೋಕ್ಷ ಎಂದು ಗುರುತಿಸಲಾಗಿದೆ. ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಮನೆಯಲ್ಲಿ ತಂದೆ–ಮಗನ ನಡುವೆ ಕೌಟುಂಬಿಕ ಕಲಹದ ಹಿನ್ನೆಲೆ ಜಗಳ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಗಲಾಟೆಯ ವೇಳೆ ಕೋವಿಯಿಂದ ಗುಂಡು ಹೊರಟು ಬಾಲಕನಿಗೆ ತಗುಲಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇದೇ ವೇಳೆ ತಂದೆ ವಸಂತ್ ಅಮೀನ್ ಅವರಿಗೆ ಚೂರಿ ಇರಿತದ ಗಾಯಗಳಾಗಿದ್ದು, ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಾಲಕನೇ ಕೋವಿಯಿಂದ ಗುಂಡು ಹಾರಿಸಿಕೊಂಡನೇ ಅಥವಾ ತಂದೆಯೇ ಗುಂಡು ಹಾರಿಸಿದ್ದಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ. ಇದರಿಂದಾಗಿ ಘಟನೆ ಹಲವು ಅನುಮಾನಗಳನ್ನು ಹುಟ್ಟಿಸಿದ್ದು, ಬಾಲಕನ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕಡಬ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲಾ ಸಾಧ್ಯ ಕೋಣಗಳಿಂದ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ತನಿಖೆಯ ಬಳಿಕ ಹೊರಬರುವ ನಿರೀಕ್ಷೆಯಿದೆ.




