ಕುಂದಾಪುರ: ಕೋಟೇಶ್ವರ ಒಳಪೇಟೆಯ ಪಿಡಬ್ಲೂಡಿ ರಸ್ತೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಒತ್ತುವರಿ ಆರೋಪಗಳ ಹಿನ್ನೆಲೆಯಲ್ಲಿ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುರುವಾರ ಸ್ಥಳ ಪರಿಶೀಲನೆ ನಡೆಸಿ ಜಂಟಿ ಸರ್ವೇ ಕಾರ್ಯ ಕೈಗೊಂಡರು.
ರಸ್ತೆಯ ಎರಡೂ ಬದಿಗಳಲ್ಲಿರುವ ಸರ್ಕಾರಿ ಜಾಗವನ್ನು ಕೆಲವರು ಅತಿಕ್ರಮಿಸಿಕೊಂಡು ಕಟ್ಟಡ, ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ರಸ್ತೆ ಜಾಗ ಕಿರಿದಾಗುತ್ತಿದ್ದು, ಸಾರ್ವಜನಿಕ ಉದ್ದೇಶದ ಜಾಗವನ್ನು ವೈಯಕ್ತಿಕ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ದೂರು ಸ್ಥಳೀಯರಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಟೇಶ್ವರ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಲಾಗಿತ್ತು.
ದೂರಿನ ಆಧಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರಸ್ತೆ ಹಾಗೂ ಅದರ ಪಕ್ಕದ ಸರ್ಕಾರಿ ಜಾಗದ ಗಡಿ ಗುರುತಿಸುವ ಕಾರ್ಯ ಆರಂಭಿಸಿದರು. ಸರ್ವೇ ಆರಂಭಕ್ಕೂ ಮುನ್ನ ಸಿಬ್ಬಂದಿ ಕೊರತೆಯಿಂದಾಗಿ ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯ ನಡೆಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಬಳಿಕ ಸರ್ವೇ ಕಾರ್ಯವನ್ನು ಮುಂದುವರಿಸಲಾಯಿತು.
ಬೀಜಾಡಿ ಬೈಪಾಸ್ ತಿರುವಿನಿಂದ ಆರಂಭವಾದ ಸರ್ವೇ, ಬೀಜಾಡಿ ಮತ್ತು ಗೋಪಾಡಿ ಗ್ರಾಮ ಪಂಚಾಯಿತಿಗಳ ಗಡಿ ಭಾಗದಲ್ಲಿರುವ ಕಮಲಮ್ಮ ಕಲ್ಯಾಣ ಮಂಟಪದವರೆಗೆ ನಡೆಯಿತು. ರಸ್ತೆ ವ್ಯಾಪ್ತಿಗೆ ಸಂಬಂಧಿಸಿದಂತೆ ಅಳತೆ ಹಾಗೂ ಗಡಿ ಗುರುತಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಂಡರು.
ಸರ್ವೇಯಿಂದ ಪಿಡಬ್ಲೂಡಿ ರಸ್ತೆಗೆ ಸೇರಿದ ಜಾಗದ ನಿಖರ ಗಡಿ ಹಾಗೂ ಅಲ್ಲಿ ಯಾವುದೇ ಅತಿಕ್ರಮಣ ನಡೆದಿದೆಯೇ ಎಂಬುದರ ಕುರಿತು ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ. ಮುಂದಿನ ಕ್ರಮಕ್ಕೆ ಸರ್ವೇ ವರದಿ ಪ್ರಮುಖ ಆಧಾರವಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕುಂದಾಪುರ ರಾಜಸ್ವ ನಿರೀಕ್ಷಕ ದಿನೇಶ್ ಹೂದಾರ್, ಕೋಟೇಶ್ವರ ಗ್ರಾಮ ಆಡಳಿತಾಧಿಕಾರಿ ಧೀರಜ್ ಹೆಮ್ಮಾಡಿ, ಬೀಜಾಡಿ ಗ್ರಾಮ ಆಡಳಿತಾಧಿಕಾರಿ ಮಹೇಶ್, ಪಿಡಬ್ಲೂಡಿ ಕಿರಿಯ ಇಂಜಿನಿಯರ್ ರಾಮುಶೇಖರ್, ಸರ್ವೇ ಇಲಾಖೆಯ ಯೂಸೂಫ್, ಕೋಟೇಶ್ವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀಲ್ ಹಾಗೂ ಬೀಜಾಡಿ–ಗೋಪಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸ್ಥಳೀಯರಾದ ಗಣೇಶ ಪುತ್ರನ್ ಗೋಪಾಡಿ, ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ ಪೂಜಾರಿ, ನಾರಾಯಣ ಪೈಂಟರ್, ಶೇಖರ ಮಠದಬೆಟ್ಟು, ಶ್ರೀನಿವಾಸ ಕುಂದರ್, ರಾಜು ಬೆಟ್ಟಿನಮನೆ, ಅಣ್ಣಪ್ಪ ಬೆಟ್ಟಿನಮನೆ, ನಾಗರಾಜ್ (ಲಾಲಿ), ಗಣೇಶ್ ಪಡುಚಾವಡಿ ಬೆಟ್ಟು, ಶ್ರೀಧರ್ ಬಂಡೀಕಡು, ಸತೀಶ್ ಗೋಳಿಬೆಟ್ಟು, ಬಾಬಣ್ಣ ಅಂಕದಕಟ್ಟೆ, ರಾಘು ಪೈಂಟರ್, ಸುರೇಶ್ ಶೆಟ್ಟಗಾರ್ ಸೇರಿದಂತೆ ಹಲವರು ಸರ್ವೇ ಕಾರ್ಯದ ವೇಳೆ ಉಪಸ್ಥಿತರಿದ್ದರು.




