Friday, April 24, 2026

ಕುಂದಾಪುರ: ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಬಿಡುಗಡೆ

ಮಾನವೀಯತೆ ಮೇಲೆ ಸಮಾಜ ಕಟ್ಟಬೇಕು: ಮಾಜಿ ಸಚಿವ ಕಿಮ್ಮನೆ ರತ್ನಾಕರ್

– ಕಿಮ್ಮನೆ ರತ್ನಾಕರ್, ಮಾಜಿ ಸಚಿವರು
ಬಹುತೇಕ ರಾಜ, ಮಹಾರಾಜರು ಬೇರೆಯವರನ್ನು ತುಳಿದೆ ಅಧಿಕಾರಕ್ಕೆ ಬಂದವರು. 50 ವರ್ಷದ ಜೀವಿತಾವಧಿಯಲ್ಲಿ ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ನೀಡಿದಷ್ಟು ತಾಪತ್ರಯಗಳನ್ನು ಭಾರತ ದೇಶದಲ್ಲಿ ಬೇರೆಯವರು ನೀಡಿಲ್ಲ.
.
ಯುಡಿ ನ್ಯೂಸ್ ಡಾಟ್ ಕಾಮ್

ಕುಂದಾಪುರ: ದಕ್ಷಿಣ ಕನ್ನಡದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ದುಃಖ ಇದೆ. ಇಲ್ಲಿ ಸಾಮಾಜಿಕ ಸಾಮರಸ್ಯ ಹೆಚ್ಚಾಗಬೇಕು ಎನ್ನುವ ಕಾಳಜಿ ಇದೆ. ಸುಪಾರಿ ಹಂತಕರಿಗಾಗುವ ಶಿಕ್ಷೆಯಂತೆ ಕೋಮುವಾದಿ ಹಂತಕರಿಗೆ ಅಷ್ಟೇ ಕಠಿಣ ಶಿಕ್ಷೆಯಾಗಬೇಕು. ಮಾನವೀಯತೆ ಮೇಲೆ ಸಮಾಜ ಕಟ್ಟಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ನಗರದ ಹೊರವಲಯದ ಹಂಗಳೂರಿನ ಯುನಿಟಿ ಹಾಲ್‌ನಲ್ಲಿ ಭಾನುವಾರ ಸಂಜೆ ಸಹಬಾಳ್ವೆ ಕುಂದಾಪುರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಬರೆದ ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಾಟ್ಸ್ ಆ್ಯಪ್ ಯುನಿವರ್ಸಿಟಿಯ ಪ್ರಭಾವ ವಿದ್ಯಾವಂತರನ್ನು ಬಿಟ್ಟಿಲ್ಲ. ಸ್ವಾತಂತ್ರ್ಯ ನಂತರ ಸಾಮರಸ್ಯ ಕೆಡಿಸುವ ಎಷ್ಟೋ ಘಟನೆಗಳು ಆಕಸ್ಮಿಕವಲ್ಲ, ಹೆಚ್ಚಿನವು ಯೋಜಿತ ರೀತಿಯದ್ದು. ವ್ಯಕ್ತಿ ಹಾಗೂ ಸಿದ್ಧಾಂತಗಳನ್ನು ವಿಮರ್ಶೆ ಮಾಡದೆ ಒಪ್ಪಬಾರದು. ಕಟ್ಟು ಕಥೆಗಳನ್ನು ಕಟ್ಟಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸಗಳು ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಕಿಮ್ಮನೆ ಕಳವಳ ವ್ಯಕ್ತಪಡಿಸಿದರು.

ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ದೇಶದಲ್ಲಿ ಚುನಾವಣೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಹಿಳಾ ಮಸೂದೆಯನ್ನು ತಂದಿರುವ ನಿಜ ಉದ್ದೇಶದ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು. ಸಮಾಜಕ್ಕೆ ನೈಜ ಇತಿಹಾಸ ತಿಳಿಸುವ ಕೆಲಸಗಳು ನಡೆಯಬೇಕು. ಬೇರೆಯವರು ಹೇಳಿದ ಸುಳ್ಳು ಸಂಗತಿಗಳೇ ಸತ್ಯವಾಗುತ್ತಿದೆ. ಓದುವ ಅಭ್ಯಾಸ ಹೆಚ್ಚಾಗಬೇಕು. ವಿದ್ಯೆ ಕಲಿತವರೆಲ್ಲ ಜ್ಞಾನವಂತರಲ್ಲ, ಜ್ಞಾನವಂತರೆಲ್ಲ ವಿದ್ಯಾವಂತರೂ ಅಲ್ಲ. ಅವಕಾಶವಾದಿಗಳು ಚರಿತ್ರೆಯಲ್ಲೇ ಇಲ್ಲದ ಉರಿ ಗೌಡ ಹಾಗೂ ನಂಜೇ ಗೌಡರನ್ನು ತಂದು ಗುರಿ ಸಾಧನೆ ಮಾಡುವ ಪ್ರವೃತ್ತಿಗಳು ಬೆಳೆಯುತ್ತಿದೆ. ಇತರರನ್ನು ಗೌರವಿಸಿ, ಗೌರವ ಪಡೆದುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕವನ್ನು ಓದುವ ಜೊತೆ ಇತರರೊಂದಿಗೆ ಪುಸ್ತಕದಲ್ಲಿನ ಒಳ್ಳೆಯ ಅಂಶಗಳ ಬಗ್ಗೆ ಚರ್ಚೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ರಾಜಕೀಯದ ದುರುದ್ದೇಶಕ್ಕಾಗಿ ವೈಯಕ್ತಿಕ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬಾರದು ಎಂದರು.

ಕೃತಿ ಪರಿಚಯ ಮಾಡಿದ ಪತ್ರಕರ್ತ ನವೀನ್ ಸೂರಿಂಜೆ ಅವರು, ಬಹದ್ದೂರ್ ಟಿಪ್ಪು ಸುಲ್ತಾನ್ ಸಾವಿನ ದಿನಗಳಲ್ಲಿ ನಾಗರೀಕ ಟಿಪ್ಪು ಆಗಿ ಗುರುತಿಸಿಕೊಳ್ಳುತ್ತಾರೆ. ಪ್ರಜಾಪ್ರಭುತ್ವ ಪರವಾದ ನಿಲುವು ತೋರುತ್ತಾರೆ. ಅವರಿಗೆ ಇದಕ್ಕೆಲ್ಲ ಕರಾವಳಿ ಅವರಿಗೆ ಆಡಂಬೊಲವಾಗಿತ್ತು. ಈ ಭಾಗದ ಸಣ್ಣ ಸಣ್ಣ ರಾಜರೊಂದಿಗೊ ಅವರ ಸಂಬಂಧ ಗೌರವಯುತ ಹಾಗೂ ಸೌಹಾರ್ದಯುತವಾಗಿತ್ತು. ಟಿಪ್ಪು ಎಂದೂ ಕೋಮುವಾದಿ ಆಗಿರಲಿಲ್ಲ. ಶ್ರೀ ಕೃಷ್ಣನ ಚಿತ್ರ ಇರುವ ನಾಣ್ಯವನ್ನು ಮುದ್ರಿಸಿದ ಏಕೈಕ ರಾಜ ಟಿಪ್ಪು ಆಗಿದ್ದರು. ಶಂಕರಾಚಾರ್ಯರ ಮಠಗಳೊಂದಿಗೂ ಅವರು ಧಾರ್ಮಿಕ ಸಹಿಷ್ಣುತೆ ಹೊಂದಿದ್ದರು. ಕಪೋಲಕಲ್ಪಿತ ಸುಳ್ಳು ಕಥೆಗಳೇ ಇಂದು ಇತಿಹಾಸದ ಸತ್ಯವನ್ನು ಬದಲಾಯಿಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಿಪ್ಪು ಯಾವುದೇ ಚರ್ಚ್‌ಗಳನ್ನು ಧ್ವಂಸಗೊಳಿಸಿಲ್ಲ. ಬ್ರಿಟೀಷರ ಇರಿವಿಕೆಯ ಬಗ್ಗೆ ಕೇವಲ ಪರಿಶೀಲನೆಗಾಗಿ ಚರ್ಚ್‌ಗಳಿಗೆ ಅವರ ಸೈನ್ಯ ಹೋಗಿತ್ತು ಎಂದರು.

ಸಹಬಾಳ್ವೆ ಕುಂದಾಪುರ ಇದರ ಅಧ್ಯಕ್ಷ ರಾಮಕೃಷ್ಣ ಹೇರ್ಳೆ ಎ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಬಾಳ್ವೆ ಸಂಘಟನೆ ಅಧ್ಯಕ್ಷ ಪ್ರೊ.ಫಣಿರಾಜ್, ಜಿಲ್ಲಾ ಮುಸ್ಲಿಂ ಒಕ್ಕೂಟದ ಕುಂದಾಪುರ ತಾಲ್ಲೂಕು ಅಧ್ಯಕ್ಷ ಎಸ್.ದಸ್ತಗಿರಿ ಕಂಡ್ಲೂರು ಇದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ ಸ್ವಾಗತಿಸಿ, ನಿರೂಪಿಸಿದರು. ಆಶಾ ಕರ್ವೆಲ್ಲೋ ವಂದಿಸಿದರು.

More like this
Related

ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಯಗಳಿಗೆ ಮಧ್ಯಂತರ ತಡೆಯಾಜ್ಞೆ

ಬೆಂಗಳೂರು: ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ...

4ನೇ ಮಹಿಳಾ ಟಿ20: ಸರಣಿ ಕಳೆದುಕೊಂಡ ಬಳಿಕ ಭಾರತಕ್ಕೆ ಬೌಲಿಂಗ್ ಸವಾಲು

ಜೋಹಾನ್ಸ್‌ಬರ್ಗ್: ಐದು ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ ಕೈಚೆಲ್ಲಿರುವ ಭಾರತ ಮಹಿಳಾ...

ಉಪಚುನಾವಣೆ ಫಲಿತಾಂಶ ಮೇ 4: ಡಿಕೆ ಶಿವಕುಮಾರ್ ಭವಿಷ್ಯಕ್ಕೆ ತಿರುವು ಸಾಧ್ಯ

ಬೆಂಗಳೂರು: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗಳ ಫಲಿತಾಂಶ ಮೇ...

ಬೆಂಗಾಲ್ ಚುನಾವಣೆ: ಕರ್ತವ್ಯ ನಿರ್ಲಕ್ಷ್ಯ ಆರೋಪಕ್ಕೆ ಪೊಲೀಸ್ ಅಧಿಕಾರಿ ಅಮಾನತು

ಕೊಲ್ಕತ್ತಾ: Election Commission of India (ಇಸಿಐ) ಪಶ್ಚಿಮ ಬಂಗಾಳದ ಉತ್ತರ...

Copying is disabled on Udupi Digital News.