ಕುಂದಾಪುರ: ಕಾರು ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಢಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಸಂಭವಿಸಿದೆ.
ಕುಂದಾಪುರ ನಗರದ ಭಂಡಾರ್‌ಕಾರ್ಸ್ ರಸ್ತೆ ನಿವಾಸಿ ಅಜಿತ್ ಪೌಲ್ ಲೂಯಿಸ್ (55) ಮೃತ ವ್ಯಕ್ತಿ. ಗಂಭೀರ ಗಾಯಗೊಂಡಿದ್ದ ಅವರನ್ನು ಎಂ.ಎಚ್.ಐ ತುರ್ತು ಆಪತ್ಪಾಂಧವ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಹಾಗೂ ಅಬ್ರಾರ್ ಗಂಗೊಳ್ಳಿಯವರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅಜಿತ್ ಅವರು ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ದೆಹಲಿಯ ಖಾಸಗಿ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದು, ವರ್ಷದಲ್ಲಿ ನಾಲ್ಕೈದು ಬಾರಿ ಊರಿಗೆ ಬರುತ್ತಿದ್ದರು. ಈ ಬಾರಿ ತಾಯಿಯ ಅನಾರೋಗ್ಯದ ಹಿನ್ನೆಲೆ ಕಳೆದ 8-10 ದಿನಗಳ ಹಿಂದಷ್ಟೆ ಊರಿಗೆ ಆಗಮಿಸಿದ್ದರು . ಮುಳ್ಳಿಕಟ್ಟೆ ಸಮೀಪದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಪುತ್ರಿಯ ಶೈಕ್ಷಣಿಕ ಪ್ರಗತಿ ತಿಳಿಯಲು ಶಾಲೆಗೆ ಭೇಟಿ ನೀಡಲು ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅನೂಪ್ ನಾಯಕ್, ಸುಧಾ ಪ್ರಭು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.




