ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕಡಿಯಾಳಿಯ ಯುವ ಘಟಕದ ನೇತೃತ್ವದಲ್ಲಿ 9ನೇ ವರ್ಷದ ‘ಉಡುಪಿ ದಾಂಡಿಯಾ 2026’ ಕಾರ್ಯಕ್ರಮ ಅಕ್ಟೋಬರ್ 17ರಂದು ಶನಿವಾರ ಸಂಜೆ 6 ಗಂಟೆಯಿಂದ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಯುವ ಘಟಕದ ಅಧ್ಯಕ್ಷ ಪ್ರದೀಪ್ ಶೆಟ್ಟಿ ತಿಳಿಸಿದ್ದಾರೆ.

ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಜೋಡಿ ನೃತ್ಯ, ಅತ್ಯುತ್ತಮ ವೇಷಭೂಷಣ, ಅತ್ಯುತ್ತಮ ಸಮೂಹ ನೃತ್ಯ ಹಾಗೂ ಮಕ್ಕಳ ಅತ್ಯುತ್ತಮ ವೇಷಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶೇಷ ಆಕರ್ಷಣೆಯಾಗಿ ಅತ್ಯುತ್ತಮ ನವವಿವಾಹಿತ ಜೋಡಿ ನೃತ್ಯಕ್ಕೆ ವಿಶೇಷ ಬಹುಮಾನ ನೀಡಲಾಗುವುದು. 2026ರ ಅಕ್ಟೋಬರ್ 17ರ ವೇಳೆಗೆ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸದ ದಂಪತಿಗಳಿಗೆ ಮಾತ್ರ ಈ ವಿಭಾಗದಲ್ಲಿ ಭಾಗವಹಿಸಲು ಅವಕಾಶವಿದೆ
ಕಾರ್ಯಕ್ರಮದಲ್ಲಿ 2025ರಲ್ಲಿ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದ ಭಾರತದ ಮಹಿಳಾ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದ ಧನಲಕ್ಷ್ಮೀ ಪೂಜಾರಿ, ಕನ್ನಡ ಚಲನಚಿತ್ರದ ಅಭಿನಯಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ರೂಪಶ್ರೀ ವರ್ಕಾಡಿ ಹಾಗೂ ಭರತನಾಟ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ವಿದುಷಿ ದೀಕ್ಷಾ ಸೇರಿದಂತೆ ಹಲವು ತುಳು ಚಲನಚಿತ್ರ ನಟರು ಭಾಗವಹಿಸಲಿದ್ದಾರೆ.

ದಾಂಡಿಯಾ ಕಾರ್ಯಕ್ರಮಕ್ಕಾಗಿ ಮೈದಾನವನ್ನು ವಿಶಿಷ್ಟ ರೀತಿಯಲ್ಲಿ ಅಲಂಕರಿಸಲಾಗುವುದು. ಆಹಾರ ಮಳಿಗೆಗಳ ವ್ಯವಸ್ಥೆಯೊಂದಿಗೆ ವಿಶೇಷ ಸುಡುಮದ್ದು ಪ್ರದರ್ಶನವೂ ನಡೆಯಲಿದೆ . ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಹಾಗೂ ನೃತ್ಯದಲ್ಲಿ ಭಾಗವಹಿಸುವ ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಅಶ್ವತ್ ದೇವಾಡಿಗ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೇಯಸ್ ದೇವಾಡಿಗ ಕಡಿಯಾಳಿ ಕೋಶಾಧಿಕಾರಿ ವಿಘ್ನೇಶ್ ಪ್ರಭು ಹಾಗೂ ವಿವೇಕ್ ಕಾಮತ್ ಉಪಸ್ಥಿತರಿದ್ದರು.




