ಕುಂದಾಪುರ: ತಾಲೂಕಿನ ಹೊಸಂಗಡಿ ತಾರ್ಕಿಮಕ್ಕಿ ನಿವಾಸಿ ಯುವಕನೋರ್ವ ಅ.2ರಿಂದ ನಾಪತ್ತೆಯಾಗಿರುವ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವಕನನ್ನು ಹೊಸಂಗಡಿ ತಾರ್ಕಿಮಕ್ಕಿ ನಿವಾಸಿ ಕವೀನಾ ನಾಯ್ಕ್ (26) ಎಂದು ಗುರುತಿಸಲಾಗಿದೆ. ಕವೀನಾ ಅವರು ಹಾಲ್ಕಲ್ ಬಳಿ ಸ್ವಂತ ಟಿಪ್ಪರ್ ಹೊಂದಿದ್ದು, ಕಳೆದ 3-4 ವರ್ಷಗಳಿಂದ ಟಿಪ್ಪರ್ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.
ಅ.2ರಂದು ಸಂಜೆ ಸುಮಾರು 6.30ರ ವೇಳೆಗೆ ಸ್ನೇಹಿತನ ಬಳಿ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ ಕವೀನಾ ಮನೆಯಿಂದ ಹೊರಟಿದ್ದರು. ಆದರೆ ಬಳಿಕ ಮನೆಗೆ ವಾಪಸ್ ಆಗಿಲ್ಲ. ಕುಟುಂಬಸ್ಥರು ಹಾಗೂ ಸ್ನೇಹಿತರು ವಿವಿಧೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ ಎಂದು ಅವರ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕವೀನಾ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಈವರೆಗೆ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಯುವಕ ನಾಪತ್ತೆಯಾಗಿರುವ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕವೀನಾ ಅವರ ನಾಪತ್ತೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಲಾಗುತ್ತಿದ್ದು, ಅವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.




