ಉಡುಪಿ: ಪಕ್ಷದ ಕಾರ್ಯಕರ್ತರು ‘ಮುಖ್ಯಮಂತ್ರಿ ಬರುತ್ತಿದ್ದಾರೆ’ ಎಂಬ ಪೋಸ್ಟರ್‌ಗಳನ್ನು ಹಾಕುವುದಕ್ಕಿಂತ, ತಮ್ಮ ಸರಕಾರವು ವಾರ್ಡ್ ಅಥವಾ ಗ್ರಾಮಕ್ಕೆ ಏನು ಅಭಿವೃದ್ಧಿ ಮಾಡಿದೆ ಎಂಬುದನ್ನು ತೋರಿಸುವ ಸ್ಪರ್ಧಾತ್ಮಕ ರಾಜಕೀಯ ಸಂಸ್ಕೃತಿ ಬೆಳೆಯಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಭಿಪ್ರಾಯಪಟ್ಟರು.
ಉಡುಪಿಯ ಪುರಭವನದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅಥವಾ ಶಾಸಕರಾಗುವ ಮೊದಲು ಸ್ಥಳೀಯ ಸಂಸ್ಥೆಗಳಿಗೆ ಅರ್ಹ ನಾಯಕರನ್ನು ಆಯ್ಕೆ ಮಾಡಿ ಕಳುಹಿಸಬೇಕು. ಅವರಿಗೆ ತಮ್ಮ ಪ್ರದೇಶದ ಸುರಕ್ಷತೆ, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವಿರಬೇಕು ಎಂದರು.
ದೇಶದ ನಗರಸಭೆಗಳು ಮತ್ತು ಮಹಾನಗರ ಪಾಲಿಕೆಗಳು ಕಳಪೆ ನಿರ್ವಹಣೆಯಿಂದ ಬಳಲುತ್ತಿವೆ. ನೈರ್ಮಲ್ಯ ಕಾಪಾಡಲು ಅಗತ್ಯವಾದ ಹಣಕಾಸಿನ ಕೊರತೆಯೂ ಇದೆ. ರಾಜಕೀಯವು ಕೇವಲ ಉಚಿತ ಕೊಡುಗೆಗಳ ಘೋಷಣೆಗಳ ಪೈಪೋಟಿಯಾಗದೆ, ಹೆಚ್ಚು ಜವಾಬ್ದಾರಿಯುತವಾಗಿರಬೇಕು. ಕರ್ನಾಟಕವು ಬೆಂಗಳೂರಿನ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೆ, ಉಡುಪಿ ಸೇರಿದಂತೆ ಇತರ ಜಿಲ್ಲೆಗಳನ್ನೂ ಸಮಾನವಾಗಿ ಬೆಳೆಸಬೇಕು ಎಂದು ಹೇಳಿದರು.
ಯುಪಿಐ ವ್ಯಾಪಾರಿ ವಹಿವಾಟುಗಳ ಮೇಲಿನ ಎಂಡಿಆರ್ ಶುಲ್ಕದ ಕುರಿತು ಸರಕಾರ ನಿರ್ಧಾರ ಕೈಗೊಳ್ಳುವಾಗ ಸಮತೋಲನ ಕಾಯ್ದುಕೊಳ್ಳಬೇಕಿತ್ತು. ₹50 ಲಕ್ಷ ಕೋಟಿ ಬಜೆಟ್ ಮಂಡಿಸುವ ಕೇಂದ್ರ ಸರಕಾರಕ್ಕೆ ಎಂಡಿಆರ್ ಶುಲ್ಕದ ಮೂಲಕ ಸಂಗ್ರಹವಾಗುವ ₹15 ಸಾವಿರ ಕೋಟಿ ದೊಡ್ಡ ಮೊತ್ತವಲ್ಲ. ಆದ್ದರಿಂದ ಕಾರ್ಪೊರೇಟ್ ಕಂಪೆನಿಗಳಿಗೆ ತೆರಿಗೆ ವಿನಾಯಿತಿ ನೀಡುವ ರೀತಿಯಲ್ಲಿಯೇ ಚಿಲ್ಲರೆ ವ್ಯಾಪಾರಿಗಳಿಗೂ ಎಂಡಿಆರ್ ಶುಲ್ಕದಿಂದ ವಿನಾಯಿತಿ ನೀಡಬೇಕು ಎಂದು ಅಣ್ಣಾಮಲೈ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತೃಪ್ತಿಯಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಸರಕಾರದ ನಿರ್ಧಾರಗಳೂ ತಪ್ಪಾಗಿರಬಹುದು. ಯಾವುದೇ ಪಕ್ಷದಲ್ಲಿದ್ದರೂ ಸರಕಾರದ ಯೋಜನೆಗಳಿಂದ ತೊಂದರೆಯಾದರೆ ಅದನ್ನು ವಿರೋಧಿಸಬೇಕು. ಜನರಿಗೆ ಸಮಸ್ಯೆ ಉಂಟುಮಾಡುವ ನೀತಿಗಳ ವಿರುದ್ಧ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಉತ್ತಮ ಲಕ್ಷಣವಾಗಿದೆ ಎಂದರು.
ದೇಶದಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬಂಡವಾಳಶಾಹಿ ಕಂಪೆನಿಗಳಲ್ಲಿ ಶೇ.50ಕ್ಕಿಂತ ಹೆಚ್ಚು ವಿದೇಶಿ ಹೂಡಿಕೆ ಇರುವುದು ಅಪಾಯಕಾರಿಯಾಗಬಹುದು. ದೇಶೀಯ ಕಂಪೆನಿಗಳು ದುರ್ಬಲವಾಗಿರುವುದರಿಂದ ವಿದೇಶಿ ಕಂಪೆನಿಗಳು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಇದು ಮುಂದಿನ ದಿನಗಳಲ್ಲಿ ದೇಶದ ಭದ್ರತೆಗೆ ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದರು.
ಉಡುಪಿ ಜಿಲ್ಲೆಯ ಜನರು ಶಿಕ್ಷಿತರು, ಸುಸಂಸ್ಕೃತರು ಮತ್ತು ಪ್ರಾಮಾಣಿಕರಾಗಿದ್ದರೂ ಜಿಲ್ಲೆಗೆ ದೊಡ್ಡ ಕಂಪೆನಿಗಳು ಬರುತ್ತಿಲ್ಲ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ನಡೆಸಿ ಉಡುಪಿಯನ್ನು ಜ್ಞಾನಾಧಾರಿತ ಕೇಂದ್ರವನ್ನಾಗಿ (ನಾಲೆಡ್ಜ್ ಹಬ್) ರೂಪಿಸಬೇಕು ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು.
ಚಿಲ್ಲರೆ ವ್ಯಾಪಾರವು ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದ ಸ್ಥಳೀಯ ಪ್ರದೇಶಗಳ ಆರ್ಥಿಕ ಪ್ರಗತಿಗೂ ಸಹಕಾರಿಯಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ಹಣ ಮತ್ತು ತೆರಿಗೆಯಷ್ಟೇ ಮುಖ್ಯವಲ್ಲ; ಜನರ ಬದುಕು ಹಾಗೂ ಜೀವನೋಪಾಯವೂ ಮುಖ್ಯವಾಗಿದ್ದು, ಸರಕಾರ ಈ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳಿದರು.
ಚಿಲ್ಲರೆ ವ್ಯಾಪಾರದಿಂದ ದೊರೆಯುವ ಆದಾಯ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುತ್ತದೆ. ಆದರೆ ದೊಡ್ಡ ಬಂಡವಾಳಶಾಹಿ ಕಂಪೆನಿಗಳ ಲಾಭ ವಿದೇಶಗಳಿಗೆ ಹರಿದುಹೋಗುವ ಸಾಧ್ಯತೆಯಿದ್ದು, ಇದರಿಂದ ಸ್ಥಳೀಯ ಆರ್ಥಿಕತೆಗೆ ನಿರೀಕ್ಷಿತ ಪ್ರಯೋಜನ ದೊರೆಯುವುದಿಲ್ಲ. ಆದ್ದರಿಂದ ಚಿಲ್ಲರೆ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡಬೇಕು. ಕೇಂದ್ರ ಹಣಕಾಸು ಸಚಿವರು ಮತ್ತು ವಾಣಿಜ್ಯ ಸಚಿವರು ಸಮನ್ವಯದಿಂದ ಈ ಕುರಿತು ಚಿಂತನೆ ನಡೆಸಬೇಕು ಎಂದು ತಿಳಿಸಿದರು.
‘ಮೇಕ್ ಇನ್ ಇಂಡಿಯಾ’ ಘೋಷಣೆಯ ಬಳಿಕ ದೇಶೀಯ ಉತ್ಪಾದನೆಗೆ ಮತ್ತಷ್ಟು ಒತ್ತು ನೀಡುವ ಉದ್ದೇಶದಿಂದ ‘ಮೇಕ್ ಫಾರ್ ಇಂಡಿಯಾ’ ಅಭಿಯಾನಕ್ಕೂ ಆದ್ಯತೆ ನೀಡಬೇಕು. ಚೀನಾ ದೇಶೀಯ ಉತ್ಪಾದನೆಗೆ ಒತ್ತು ನೀಡಿ ಆರ್ಥಿಕವಾಗಿ ಬೆಳೆದಿದೆ. ಭಾರತವೂ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಬೇಕು. ಈ ಕುರಿತು ಜನಸಮುದಾಯದಲ್ಲಿ ಚರ್ಚೆ ಆರಂಭವಾದರೆ ಕೇಂದ್ರ ಸರಕಾರದ ಗಮನ ಸೆಳೆಯಲು ಸಾಧ್ಯ ಎಂದು ಅಣ್ಣಾಮಲೈ ಹೇಳಿದರು.




