ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಗ್ರಾಮದಲ್ಲಿ ವೃದ್ಧೆಯೊಬ್ಬರ ಗಮನ ಬೇರೆಡೆ ಸೆಳೆದು ಚಿನ್ನದ ಸರ ಕಳವು ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿ 15 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಮಹೇಂದ್ರ ಶೆಟ್ಟಿ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿರುವ ವಿಶ್ವನಾಥ ಶೆಟ್ಟಿ ಅವರ ಪುತ್ರ ಉಮೇಶ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.
ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಈತನನ್ನು ಅಕ್ಟೋಬರ್ 23, 2026ರಂದು ಸುಬ್ರಹ್ಮಣ್ಯ ನಗರದ ಆತನ ಮನೆಯ ಬಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಸುಮಾರು ₹1.85 ಲಕ್ಷ ಮೌಲ್ಯದ 15 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ವಿವರಗಳ ಪ್ರಕಾರ, ಕುಕ್ಕೆಹಳ್ಳಿ ಗ್ರಾಮದ ಬಡಪಾಲು ಮನೆಯಲ್ಲಿ ವಾಸವಾಗಿದ್ದ ಬಾಬಿ ಹಾಂಡ್ತಿ (75) ಅವರ ಪುತ್ರ ಶಂಕರ ಕುಲಾಲ್ (53) ಅವರು ಸೆಪ್ಟೆಂಬರ್ 14, 2026ರಂದು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೆಪ್ಟೆಂಬರ್ 13ರಂದು ಬೆಳಿಗ್ಗೆ ಸುಮಾರು 10.30ರ ವೇಳೆಗೆ 40ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಬಾಬಿ ಹಾಂಡ್ತಿ ಅವರ ಮನೆಗೆ ಬಂದಿದ್ದರು. ಅವರ ಪುತ್ರ ದಿನೇಶ್ ಮೃತಪಟ್ಟಿರುವ ವಿಚಾರ ತನಗೆ ತಿಳಿದಿದೆ ಎಂದು ಹೇಳಿ, ಮರುದಿನ ಮನೆಗೆ ವಿಮಾ ಅಧಿಕಾರಿಗಳು ಬರಲಿದ್ದು, ಹೆಚ್ಚಿನ ಹಣ ಬಿಡುಗಡೆಯಾಗುವಂತೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಸುಮಾರು 15 ನಿಮಿಷಗಳ ಕಾಲ ಅಲ್ಲಿದ್ದು ಬಳಿಕ ತೆರಳಿದ್ದರು.
ಮಧ್ಯಾಹ್ನದ ವೇಳೆ ಬಾಬಿ ಹಾಂಡ್ತಿ ಅವರು ತಾವು ಕುತ್ತಿಗೆಯಲ್ಲಿ ಧರಿಸಿದ್ದ ಸುಮಾರು ಎರಡು ಪವನ್ ಚಿನ್ನದ ಸರವನ್ನು ಮನೆಯೊಳಗಿನ ಮೇಜಿನ ಮೇಲೆ ಇಟ್ಟಿದ್ದರು. ಮಧ್ಯಾಹ್ನ ಸುಮಾರು 1.30ಕ್ಕೆ ಬೆಳಿಗ್ಗೆ ಬಂದಿದ್ದ ವ್ಯಕ್ತಿ ಮತ್ತೆ ಮನೆಗೆ ಬಂದಿದ್ದ. ಬಾಬಿ ಹಾಂಡ್ತಿ ಅವರೊಂದಿಗೆ ಭಾವನಾತ್ಮಕವಾಗಿ ಮಾತನಾಡಿ ಸಮಾಧಾನಪಡಿಸಿದ್ದ ಎನ್ನಲಾಗಿದೆ.
ನಂತರ ಮನೆಯ ಬಾಗಿಲು ತೆರೆದಿದ್ದ ಸಂದರ್ಭದಲ್ಲಿ, ಬಾಬಿ ಹಾಂಡ್ತಿ ಅವರು ಆತನನ್ನು ಮನೆಯ ಜಗುಲಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿ ತೋಟಕ್ಕೆ ತೆರಳಿ ದನವನ್ನು ಕೊಟ್ಟಿಗೆಗೆ ಕಟ್ಟಿ ಮನೆಗೆ ಮರಳಿದ್ದರು. ಈ ವೇಳೆ ಜಗುಲಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದ ವ್ಯಕ್ತಿ ಕಾಣೆಯಾಗಿದ್ದ. ಅನುಮಾನಗೊಂಡು ಮನೆಯೊಳಗೆ ಪರಿಶೀಲಿಸಿದಾಗ ಮೇಜಿನ ಮೇಲಿಟ್ಟಿದ್ದ ಚಿನ್ನದ ಸರ ನಾಪತ್ತೆಯಾಗಿರುವುದು ತಿಳಿದುಬಂದಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಮಾರು 50ರಿಂದ 60 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ನೇತೃತ್ವದಲ್ಲಿ ಪಿಎಸ್ಐ ಪುನೀತ್ ಕುಮಾರ್ ಬಿ.ಇ. (ಕಾ.ಸು.) ಮತ್ತು ಸಿಬ್ಬಂದಿಗಳಾದ ಪ್ರವೀಣ್ ರೈ, ಪ್ರವೀಣ್ ಶೆಟ್ಟಿ, ರಮೇಶ್ ಹೆರ್ಗ, ಕೃಷ್ಣ ಪೂಜಾರಿ ಹಾಗೂ ಮಹಾಂತೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




