ಮಂಗಳೂರು: ಮಂಗಳೂರು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ. ನಗರದ ಪುರಭವನದಲ್ಲಿ ಮಾಂಡ್ ಸೊಭಾಣ್ ನೇತೃತ್ವದಲ್ಲಿ ನಡೆದ ಅತೀ ದೀರ್ಘಾವಧಿಯ ನಿರಂತರ ಸಮೂಹಗಾಯನವು 11 ದಿನ, 11 ಗಂಟೆ ಹಾಗೂ 11 ನಿಮಿಷಗಳನ್ನು ಪೂರ್ಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಸಂಜೆ 5.12ಕ್ಕೆ ನಿಗದಿತ ಸಮಯ ಪೂರ್ಣಗೊಳ್ಳುತ್ತಿದ್ದಂತೆ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಹಾಗೂ ಇತರ ಸಂಘಟಕರು ಹರ್ಷೋದ್ಗಾರದೊಂದಿಗೆ ವಿಶ್ವ ದಾಖಲೆಯ ಸಾಧನೆಯನ್ನು ಸಂಭ್ರಮಿಸಿದರು. ಈ ಹಿಂದೆ 2024ರಲ್ಲಿ ವಡ್ತಾಲ್‌ನ ಶ್ರೀ ಹರಿಕೃಷ್ಣ ಕೀರ್ತನ್ ಯಾಗ್ ಸಂಸ್ಥೆ 11 ದಿನ, 11 ಗಂಟೆ ಹಾಗೂ 11 ನಿಮಿಷಗಳ (275 ಗಂಟೆ 11 ನಿಮಿಷ) ನಿರಂತರ ಗಾಯನದ ಮೂಲಕ ನಿರ್ಮಿಸಿದ್ದ ದಾಖಲೆಯನ್ನು ಮಾಂಡ್ ಸೊಭಾಣ್‌ನ ಸಂಗೀತ ಮ್ಯಾರಥಾನ್ ಸರಿಗಟ್ಟಿದೆ.
ಮಾಂಡ್ ಸೊಭಾಣ್ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಹಾಗೂ ಸಂಸ್ಥೆಯ ದಿವಂಗತ ಸಂಸ್ಥಾಪಕ ಎರಿಕ್ ಒಝೇರಿಯೊ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಯೋಜಿಸಲಾದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಈ ಐತಿಹಾಸಿಕ ದಾಖಲೆ ಪ್ರಯತ್ನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಾಧನೆಯ ಮೂಲಕ ಮಾಂಡ್ ಸೊಭಾಣ್ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮನ್ನಣೆ ತಂದುಕೊಟ್ಟಿದೆ. ಮುಖ್ಯವಾಗಿ ಕರಾವಳಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇರಳದ ಕೆಲವು ಭಾಗಗಳಲ್ಲಿ ನೆಲೆಸಿರುವ ಕೊಂಕಣಿ ಸಮುದಾಯದ ಒಗ್ಗಟ್ಟು, ಶಿಸ್ತು ಮತ್ತು ಭಾಷಾಭಿಮಾನಕ್ಕೆ ಈ ವಿಶ್ವ ದಾಖಲೆ ಸಾಕ್ಷಿಯಾಗಿದೆ.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಅವರ ನೇತೃತ್ವದಲ್ಲಿ ಹಲವು ತಿಂಗಳುಗಳ ಕಾಲ ನಿಖರವಾದ ಸಿದ್ಧತೆ ನಡೆಸಿ ಈ ಸಂಗೀತ ಮ್ಯಾರಥಾನ್ ಆಯೋಜಿಸಲಾಗಿತ್ತು. ವಿಶ್ವ ದಾಖಲೆ ಪೂರ್ಣಗೊಂಡ ಬಳಿಕವೂ ಗಾಯನ ಮುಂದುವರಿದಿದ್ದು, ಭಾನುವಾರ ಸಂಜೆ 5 ಗಂಟೆಗೆ ‘ಟೀಮ್ ಸುಮೇಲ್’ ತಂಡದ ಗಾಯನದೊಂದಿಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳಕ್ಕೆ ಅಧಿಕೃತ ತೆರೆ ಬೀಳಲಿದೆ.
ಈ ಐತಿಹಾಸಿಕ ಸಾಧನೆಯ ಕುರಿತು ಸಂತಸ ವ್ಯಕ್ತಪಡಿಸಿದ ಲುವಿ ಜೆ. ಪಿಂಟೊ, “ಒಂದು ಸಂಸ್ಥೆಯಾಗಿ ವಿಶ್ವ ದಾಖಲೆಯನ್ನು ಹೊಂದಿರುವುದು ನಮಗೆ ಹೆಮ್ಮೆಯ ಸಂಗತಿ. ಆದರೆ ಈ ದಾಖಲೆಯ ನಿಜವಾದ ಹಕ್ಕುದಾರರು ಗಾಯಕರು ಹಾಗೂ ಈ ಬೃಹತ್ ಯೋಜನೆಗಾಗಿ ತೆರೆಮರೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬರೂ. ವಿಶ್ವದ ವಿವಿಧ ಭಾಗಗಳಿಂದ ಬೆಂಬಲ ನೀಡಿದ ಸಮಗ್ರ ಕೊಂಕಣಿ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಶ್ವ ದಾಖಲೆ ನಿರ್ಮಿಸುವುದು ಮಾತ್ರ ನಮ್ಮ ಉದ್ದೇಶವಾಗಿರಲಿಲ್ಲ. ಈ ಪ್ರಯತ್ನದ ಮೂಲಕ ಕೊಂಕಣಿ ಸಮುದಾಯದ ಐಕ್ಯತೆ ಮತ್ತು ಶಕ್ತಿಯನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ” ಎಂದು ಹೇಳಿದರು.




