ಉಡುಪಿ: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಭಾನುವಾರ ಉಡುಪಿ ಜಿಲ್ಲಾ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಗಳಲ್ಲಿನ ಆರೋಗ್ಯ ಸೇವೆಗಳು, ಮೂಲಸೌಕರ್ಯ ಹಾಗೂ ವೈದ್ಯಕೀಯ ವ್ಯವಸ್ಥೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.
ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡವನ್ನು ವೀಕ್ಷಿಸಿದ ಸಚಿವರು, ಆಸ್ಪತ್ರೆಯ ಆಡಳಿತ ವ್ಯವಸ್ಥೆ, ಸ್ವಚ್ಛತೆ ಹಾಗೂ ರೋಗಿಗಳಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ವೈದ್ಯರು ಹಾಗೂ ಶುಶ್ರೂಷಕರ ಸೇವೆಯ ಕುರಿತು ರೋಗಿಗಳಿಂದ ನೇರವಾಗಿ ಅಭಿಪ್ರಾಯ ಪಡೆದುಕೊಂಡ ಸಚಿವರಿಗೆ, ಆಸ್ಪತ್ರೆಯ ಸೇವೆಗಳ ಬಗ್ಗೆ ರೋಗಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಇದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದರು.
ನಂತರ ಶಸ್ತ್ರಚಿಕಿತ್ಸಾ (ಒಟಿ) ವಿಭಾಗಕ್ಕೆ ಭೇಟಿ ನೀಡಿ ಲಭ್ಯವಿರುವ ವೈದ್ಯಕೀಯ ಉಪಕರಣಗಳು, ಅಗತ್ಯವಿರುವ ಹೆಚ್ಚುವರಿ ಸೌಲಭ್ಯಗಳು ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್. ಅಶೋಕ್ ಹಾಗೂ ಜಿಲ್ಲಾಧಿಕಾರಿ ಸ್ವರೂಪ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಬಳಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಅಲ್ಲಿನ ತಾಯಂದಿರು ಹಾಗೂ ಮಕ್ಕಳೊಂದಿಗೆ ಸಂವಾದ ನಡೆಸಿ ಆಸ್ಪತ್ರೆಯ ಸೇವೆಗಳ ಕುರಿತು ಮಾಹಿತಿ ಪಡೆದರು.
ತದನಂತರ ಜಿಲ್ಲಾಧಿಕಾರಿ ಸ್ವರೂಪಾ ಟಿಕೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್. ಅಶೋಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ತಜ್ಞ ವೈದ್ಯರು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಆರೋಗ್ಯ ಇಲಾಖೆಯ ಸಮಗ್ರ ಸಭೆ ನಡೆಸಿದರು.
ಸಭೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸುಮಾರು 150ಕ್ಕೂ ಅಧಿಕ ಹೆರಿಗೆಗಳು ನಡೆಯುತ್ತಿರುವ ಮಾಹಿತಿ ತಿಳಿದು ಸಚಿವರು ಸಂತಸ ವ್ಯಕ್ತಪಡಿಸಿದರು. ಜೊತೆಗೆ ತಾಲೂಕು ಆಸ್ಪತ್ರೆಗಳಲ್ಲಿಯೂ ನಡೆಯುತ್ತಿರುವ ಹೆರಿಗೆಗಳ ಕುರಿತು ಮಾಹಿತಿ ಪಡೆದು ಇನ್ನಷ್ಟು ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಆಸ್ಪತ್ರೆಗೆ ಪ್ರತಿದಿನ 700 ರಿಂದ 800 ಹೊರರೋಗಿಗಳು, ಸೋಮವಾರದಂದು 900ಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಿರುವ ಮಾಹಿತಿ ಕೇಳಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ಎಲ್ಲಾ ವೈದ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ ಸಚಿವರು, ಸೇವೆಯ ಗುಣಮಟ್ಟವನ್ನು ಇನ್ನಷ್ಟು ಉತ್ತಮಪಡಿಸುವಂತೆ ಸಲಹೆ ನೀಡಿದರು. ಶಸ್ತ್ರಚಿಕಿತ್ಸೆಗಳ ಗುಣಮಟ್ಟ ಹೆಚ್ಚಿಸಲು ಅಗತ್ಯವಿರುವ ಎಲ್ಲಾ ನೆರವು ಸರ್ಕಾರದಿಂದ ದೊರೆಯಲಿದೆ ಎಂದು ಭರವಸೆ ನೀಡಿದರು.
ಉಡುಪಿ ಜಿಲ್ಲೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಉತ್ತಮ ಚಿಕಿತ್ಸೆಗಳು, ಯಶಸ್ವಿ ಶಸ್ತ್ರಚಿಕಿತ್ಸೆಗಳು ಹಾಗೂ ರೋಗಿಗಳಲ್ಲಿ ಕಂಡುಬಂದ ಉತ್ತಮ ಫಲಿತಾಂಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥರು ತಿಂಗಳಿಗೆ ಕನಿಷ್ಠ ಎರಡು ಬಾರಿ, ತಾಲೂಕು ಆಸ್ಪತ್ರೆಗಳ ಮುಖ್ಯಸ್ಥರು ತಿಂಗಳಿಗೆ ಒಂದು ಬಾರಿ ಪತ್ರಿಕಾಗೋಷ್ಠಿ ನಡೆಸಿ ಆಸ್ಪತ್ರೆಗಳ ಸಾಧನೆಗಳು ಹಾಗೂ ಉತ್ತಮ ಆರೋಗ್ಯ ಸೇವೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸೂಚಿಸಿದರು. ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಜನರ ವಿಶ್ವಾಸ ಹಾಗೂ ಒಲವು ಇನ್ನಷ್ಟು ಹೆಚ್ಚಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ದುರಸ್ತಿ ಅಗತ್ಯಗಳು, ಆಸ್ಪತ್ರೆ ಎದುರಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ ತೋಡಿರುವ ಗುಂಡಿ ಹಾಗೂ ನಿರ್ಮಾಣ ಕಾಮಗಾರಿಯ ಸ್ಥಿತಿಗತಿಯ ಕುರಿತು ಸಚಿವರು ಜಿಲ್ಲಾಧಿಕಾರಿ ಸ್ವರೂಪ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್. ಅಶೋಕ್ ಅವರಿಂದ ಮಾಹಿತಿ ಪಡೆದುಕೊಂಡರು.
ಈ ಎಲ್ಲ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಲು ಜುಲೈ 16, 2026ರಂದು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಆಯುಕ್ತರು, ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರ ಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಸಲಾಗುವುದು ಎಂದು ತಿಳಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಮ್ ಎ ಗಫೂರ್, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಮೇಶ್ ಕಾಂಚನ್ ಹಾಗೂ ಇತರರು ಉಪಸ್ಥಿತರಿದ್ದರು.




