ಕುಂದಾಪುರ: ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ನಿಗೂಢವಾಗಿ ಹತ್ಯೆಯಾದ ಕುಂದಾಪುರದ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಶಾರ್ಜಾದಿಂದ ಸೆ. 25 ರಂದು ವಿಮಾನದ ಮೂಲಕ ಹುಟ್ಟೂರಿಗೆ ಆಗಮಿಸಿದ್ದು ಶುಕ್ರವಾರ ಬೆಳಿಗ್ಗೆ ಮನೆಗೆ ಕೊಂಡೊಯ್ದು ಅಂತಿಮ ವಿಧಿಗಳನ್ನು ನೆರವೇರಿಸಿದ ಬಳಿಕ 10.30 ರ ಸುಮಾರಿಗೆ ಇಲ್ಲಿನ ಶಾಸ್ತ್ರೀ ವೃತ್ತದ ಬಳಿಯ ಸಿ.ಎಸ್.ಐ ಕೃಪಾ ದೇವಾಲಯ, ಸಮಾಧಿ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಲಾಯಿತು. ಆಲ್ವಿನ್ ಅವರ ಅಪ್ಪ-ಅಮ್ಮನ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಸಿ.ಎಸ್.ಐ ಕೃಪಾ ಚರ್ಚ್ ಧರ್ಮಗುರು ರೆ. ಫಾ. ಇಮಾನ್ಯುವಲ್ ಜಯಕರ್ ನೇತೃತ್ವದಲ್ಲಿ ಏರಿಯಾ ಅಧ್ಯಕ್ಷರಾದ ರೆ. ಕಿಶೋರ್ ಕುಮಾರ್, ರೆ. ಎಡ್ವಿನ್ ಜೋಸೆಫ್, ಸಿಎಎಸ್ಐ ಡಯಾಸಿಸ್ ಕೋಶಾಧಿಕಾರಿ ಐವಾನ್ ಸೋನ್ಸ್, ರೆ. ಪ್ರವೀಣ್ ಮಾಬೆನ್, ಬಸ್ರೂರು ಎಲಿಜಬೆತ್ ಚರ್ಚ್‌ನ ರೆ. ಫಾ. ರವಿ ಶಶಿಕಲಾ, ರೆ. ಸ್ಟೀವನ್ ಸರ್ವೋತ್ತಮ್ ಇವರು ವಿಧಿಗಳನ್ನು ನೆರವೇರಿಸಿದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಪುರಸಭೆ ಮಾಜಿ ಸದಸ್ಯರಾದ ಪ್ರಭಾಕರ್, ರಾಜೇಶ ಕಾವೇರಿ, ರತ್ನಾಕರ, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ವಿಕಾಸ ಹೆಗ್ಡೆ, ವಿಜಯ್ ಎಸ್ ಪೂಜಾರಿ, ವಿ. ನರಸಿಂಹ ಮೊದಲಾದವರು ಭೇಟಿ ನೀಡಿದ್ದರು.
ಎಂ.ಎ. ಗಫೂರ್, ಪ್ರಶಾಂತ್, ಆಕಾಶ್, ಪ್ರಮೀಳಾ ಜತ್ತನ್, ಉದಯ್ ಮೊದಲಾದವರು ಶುಕ್ರವಾರ ಮುಂಜಾನೆಯೇ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಮೃತದೇಹವನ್ನು ಕಾನೂನುಬದ್ದವಾಗಿ ಸ್ವೀಕರಿಸುವ ಪ್ರಕ್ರಿಯೆಯಲ್ಲಿ ಭಾಗಿಯಾದರು.
ಶಾರ್ಜಾದಲ್ಲಿ ಕುಂದಾಪುರ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಂಟರ್ಪೋಲ್ ಮೂಲಕ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಹೋದರ ಸೆ.22ರಂದು ನನ್ನನ್ನು ಭೇಟಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿ ದಂತೆ ಯಾವುದೇ ರೀತಿಯ ನೆರವು ಅಗತ್ಯವಿದ್ದಲ್ಲಿ ಸಹಕರಿಸುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಆರೋಪಿಗಳ ವಿರುದ್ಧ ಲೇಟರ್ ರೊಗೇಟರಿ ಅಥವಾ ರೆಡ್ ಕಾರ್ನರ್ ನೋಟೀಸ್ ಅಥವಾ ಇಂಟರ್ಪೋಲ್‌ನ ನೋಟಿಸ್ ಹೊರಡಿಸುವವರೆಗೆ, ಉಡುಪಿ ಪೊಲೀಸರಿಂದ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಮೃತರ ಕುಟುಂಬದವರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ತನಿಖೆಯ ಮುಂದಿನ ಪ್ರಗತಿ ಕುರಿತು ಮಾಹಿತಿ ಪಡೆದು ಸಮನ್ವಯ ಸಾಧಿಸಲು ಸಾಧ್ಯವಾಗಲಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ವಾರಕ್ಕೊಮೆಯಾದರೂ ಕರೆ ಮಾಡುತ್ತಿದ್ದರೂ ಯಾವುದೇ ಸಮಸ್ಯೆ ಹೇಳಿಕೊಂಡಿಲ್ಲ: ಸಹೋದರ ಅನಿಲ್ ಪ್ರಶಾಂತ್ ಕುಂದರ್
ಕುಂದಾಪುರದಲ್ಲಿ ಮಾತನಾಡಿದ ಆಲ್ವಿನ್ ಪ್ರಕಾಶ್ ಕುಂದರ್ ಹಿರಿಯ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಅವರು ಸಹೋದರನ ನೆನಪುಗಳ ಬಗ್ಗೆ ಮಾತನಾಡಿದ್ದು ತಮ್ಮ ಕೊನೆಯ ಭೇಟಿ ಬಗ್ಗೆ ಹಂಚಿಕೊಂಡರು. ಕಳೆದ ಡಿಸೆಂಬರ್‌ನಲ್ಲಿ ಪತ್ನಿ, ಮಗನ ಜೊತೆ ರಜೆಯಲ್ಲಿ ಊರಿಗೆ ಬಂದಿದ್ದು ನಮ್ಮ ಕುಟುಂಬದೊಂದಿಗೆ ಸಂಬಂಧಿಕರ ಊರಿಗೆ ಚಿಕ್ಕ ಪ್ರವಾಸ ಮಾಡಿದ್ದೆವು. ಬಿಡುವಾದಾಗ ಕರೆ ಮಾಡಿ ಮಾತನಾಡುತ್ತಿದ್ದರೂ ಕೂಡ ಅವರ ಕೌಟುಂಬಿಕ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಸೌಮ್ಯ ಸ್ವಭಾವದ ತಮ್ಮನ ಭೀಕರ ಕೊಲೆ ಮನಸ್ಸಿಗೆ ಘಾಸಿಯಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಮೂಲತಃ ಉಡುಪಿ ಕೊರಂಗ್ರಪಾಡಿ ನಿವಾಸಿಗಳಾಗಿದ್ದ ದಿವಂಗತ ಶೀಲಾ ಕುಂದರ್ ತೇಜಪಾಲ್ ಕುಂದರ್ ದಂಪತಿಯ ಪುತ್ರ ಆಲ್ವಿನ್ ಪ್ರಕಾಶ್. ಶೀಲಾ ಅವರು ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದು ವರ್ಗಾವಣೆ ಗೊಂಡ ಈ ಕುಟುಂಬ ಕುಂದಾಪುರಕ್ಕೆ ಬಂದು ನೆಲೆಸಿತ್ತು. ಆಲ್ವಿನ್ ತಾಯಿ ಕುಂದಾಪುರದ ವಿವಿದೆಡೆಯ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಕುಂದಾಪುರದ ಹೊನ್ನನಕೇರಿ ಎಂಬಲ್ಲಿ ಕುಟುಂಬ ಸ್ವಂತ ಮನೆ ಮಾಡಿದ್ದು ಸದ್ಯ ಆಲ್ವಿನ್ ಸಹೋದರ ಅನಿಲ್ ಪ್ರಶಾಂತ್, ಸಹೋದರಿ, ಸಹೋದರಿ ಪುತ್ರಿ ನೆಲೆಸಿದ್ದಾರೆ.
20 ವರ್ಷಗಳ ಹಿಂದೆ ಉದ್ಯಾವರದ ಬಲಾಯಿಪಾದೆ ಮೂಲದ ಟೀನಾ ಎನ್ನುವರನ್ನು ಆಲ್ವಿನ್ ಪ್ರಕಾಶ್ ಕುಂದರ್ ವಿವಾಹವಾಗಿದ್ದರು. ಇವರ ಇಬ್ಬರು ಪುತ್ರರ ಪೈಕಿ ಓರ್ವ ಪುತ್ರ ಅನಾರೋಗ್ಯದಿಂದ ಮೃತಪಟ್ಟ ಬಳಿಕ ದಂಪತಿ 10ನೇ ತರಗತಿ ಓದುತ್ತಿರುವ ಪುತ್ರನೊಂದಿಗೆ ನೆಲೆಸಿದ್ದರು. ಟೀನಾ ಶಾರ್ಜಾದಲ್ಲಿ ಶಿಕ್ಷಕಿ ವೃತ್ತಿಯಲ್ಲಿದ್ದರು.
50 ವರ್ಷ ಪ್ರಾಯದ ಆಲ್ವಿನ್ ಪ್ರಕಾಶ್ ಕುಂದರ್ ಕುಂದಾಪುರದ ಪ್ರತಿಷ್ಟಿತ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಬಳಿಕ ಮಂಗಳೂರಿನಲ್ಲಿ ಉನ್ನತ ವ್ಯಾಸಂಗ ಪಡೆದು ಗೋವಾದಲ್ಲಿ ಕೆಲಸ ಮಾಡಿ ಅನುಭವ ಪಡೆದು ವಿದೇಶಕ್ಕೆ ತೆರಳಿದ್ದರು.
ಅಮೇರಿಕಾ, ರಷ್ಯಾ ಮೊದಲಾದೆಡೆ ವೃತ್ತಿ ಮಾಡಿ ಕಳೆದ 14 ವರ್ಷದಿಂದ ಶಾರ್ಜಾದಲ್ಲಿ ಸೀಮನ್ಸ್ ಎಂಬ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿ ಇಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್-2 ರಲ್ಲಿ ಸೀನಿಯರ್ ಇಂಜಿನಿಯರ್ ಆಗಿ ಪದೋನ್ನತಿ ಹೊಂದಿದ್ದರು.
ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸಹೋದರ ಕುಟುಂಬ ಸಹಿತ ಊರಿಗೆ ಬರುತ್ತಿದ್ದ. ಆದರೆ ಈ ವರ್ಷ ಕ್ರೂರವಾಗಿ ಆತನ ಕೊಲೆಯಾಗಿದೆ. ಆತನ ಪತ್ನಿ, ಮಗ ಕಾಣೆಯಾಗಿದ್ದು ಸಿಕ್ಕ ಮಾಹಿತಿ ಪ್ರಕಾರ ಅವರು ದೆಹಲಿಗೆ ಬಂದಿದ್ದಾರೆ. ಮೇಲ್ನೋಟಕ್ಕೆ ಆಲ್ವಿನ್ ಪತ್ನಿಯ ಮೇಲೆ ಅನುಮಾನಗಳಿದೆ. ಈವರೆಗೆ ಆಕೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಆಕೆಯ ಮೇಲೆ ಅನುಮಾನ ಬಲವಾಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದರು.




