Tuesday, June 16, 2026

ಗೃಹಲಕ್ಷ್ಮಿ ಯೋಜನೆ ಹೊಸ ಮಾರ್ಗಸೂಚಿ: ಅರ್ಜಿ ಸಲ್ಲಿಕೆ 3 ಕಡೆ ಮಾತ್ರ ಅವಕಾಶ!

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯಡಿ ಮಾಸಿಕ 2,000 ರೂ. ಆರ್ಥಿಕ ನೆರವು ಪಡೆಯಲು ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಬೆನ್ನಲ್ಲೇ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆತಂಕ ಬೇಡ ಎಂದು ಹೇಳಿದೆ.

ಸದ್ಯ 1.28 ಕೋಟಿ ಮಹಿಳೆಯರು ಒಟ್ಟು ಫಲಾನುಭವಿಗಳಾಗಿದ್ದು, ಯಾರೂ ಗೊಂದಲಕ್ಕೊಳಗಾಗಬೇಕಿಲ್ಲ, ಸದ್ಯದಲ್ಲೇ ಹೊಸ ಮಾರ್ಗಸೂಚಿ ಪ್ರಕಟಿಸಲಾಗುವುದು. ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಲಾಭ ತಲುಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸ್ಪಷ್ಟಪಡಿಸಿದೆ.


ಗೃಹಲಕ್ಷ್ಮಿ ಹೊಸ ಅರ್ಜಿ ಸಲ್ಲಿಕೆ 3 ಕಡೆ ಅವಕಾಶ

  1. ಬೆಂಗಳೂರು ಒನ್/ ಜಿಲ್ಲಾ ಒನ್ ಕೇಂದ್ರಗಳು
  2. ಕರ್ನಾಟಕ ಒನ್
  3. ಗ್ರಾಮ ಒನ್ ಕೇಂದ್ರ
  4. ಸೈಬರ್ ಸೆಂಟರ್ ಅಥವಾ ಮೊಬೈಲ್ ಆಪ್ಗಳಲ್ಲಿ ಅವಕಾಶವಿಲ್ಲ. ರಾಜ್ಯಾದ್ಯಂತ 15,000 ಅಧಿಕೃತ ಕೇಂದ್ರಗಳು ಇವೆ.

ಯೋಜನೆಯಲ್ಲಿ ಪ್ರಮುಖವಾಗಿ ಬದಲಾವಣೆಯಾಗಲಿರುವ ಅಂಶಗಳು ಏನು?

ಸೊಸೆ ಅಥವಾ ಮಗಳಿಗೆ ಅವಕಾಶ: ಒಂದು ವೇಳೆ ಈ ಹಿಂದೆ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದ ಅತ್ತೆ ಅಥವಾ ತಾಯಿ ನಿಧನರಾಗಿದ್ದರೆ, ಅವರ ಮುಂದಿನ ವಾರಸುದಾರರಾದ ಸೊಸೆ ಅಥವಾ ಮಗಳು ಯೋಜನೆಯ ಲಾಭ ಪಡೆಯಬಹುದು. ಆದರೆ, ಅವರ ಹೆಸರು ಕಡ್ಡಾಯವಾಗಿ ಅದೇ ಪಡಿತರ ಚೀಟಿಯಲ್ಲಿರಬೇಕು.

ಪಡಿತರ ಚೀಟಿ ಕಡ್ಡಾಯ: ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್

ಯಾರು ಅರ್ಹರಲ್ಲ: ಆದಾಯ ತೆರಿಗೆ ಪಾವತಿದಾರರು ಹಾಗೂ ಇದೇ ಕಾರಣದಿಂದ ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆಯಾದ ಕಾರ್ಡ್ದಾರರು. ಇಂಥವರು ಹೊಸದಾಗಿ ಅರ್ಜಿ ಸಲ್ಲಿಸಿದರೂ ಅರ್ಹರಲ್ಲ.

ಮತ್ತೆ ಅರ್ಜಿ ಕರೆಯುತ್ತಿರುವುದು ಏತಕ್ಕೆ?
ಯೋಜನೆ ಆರಂಭವಾದಾಗಿನಿಂದ ಇದುವರೆಗೆ ಸುಮಾರು 72 ಸಾವಿರ ಕೋಟಿಗೂ ಅಧಿಕ ಹಣವನ್ನು ನೀಡಲಾಗಿದೆ. ಆದರೆ ಇಲಾಖೆಯ ಸಮೀಕ್ಷೆಯ ಪ್ರಕಾರ ಅರ್ಹರಲ್ಲದವರೂ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿದಾರರು ಹಣ ಪಡೆಯುತ್ತಿದ್ದರು. 1 ಲಕ್ಷಕ್ಕೂ ಹೆಚ್ಚು ಮಂದಿ ಮರಣ ಹೊಂದಿದವರ ಹೆಸರಿನಲ್ಲಿ ಹಣ ಡ್ರಾ ಆಗುತ್ತಿತ್ತು. ಅನರ್ಹರನ್ನು ಯೋಜನೆಯಿಂದ ಕೈಬಿಡಲು ಈ ನವೀಕರಣ ಪ್ರಕ್ರಿಯೆ ನಡೆಲಾಗುತ್ತಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ?
ಏಕಕಾಲಕ್ಕೆ ಎಲ್ಲರೂ ಮುನ್ನುಗ್ಗಿದರೆ ಸರ್ವರ್ಮತ್ತು ತಾಂತ್ರಿಕ ಸಮಸ್ಯೆ ಎದುರಾಗುವುದರಿಂದ, ಹಂತ-ಹಂತವಾಗಿ ಅರ್ಜಿ ಸಲ್ಲಿಸಲು ಇಲಾಖೆ ವ್ಯವಸ್ಥೆ ಮಾಡುತ್ತಿದೆ. ಯೋಜನೆ ನವೀಕರಿಸಿಕೊಳ್ಳುವ ಕುರಿತು ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ನೇರವಾಗಿ ಸಂದೇಶ ಕಳುಹಿಸಲು ಚಿಂತನೆ ನಡೆದಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?

  1. ಮನೆ ಯಜಮಾನಿಯ ಹೆಸರು ಮತ್ತು ಆಧಾರ್ ಸಂಖ್ಯೆ
  2. ಮನೆ ಯಜಮಾನಿಯ ಬ್ಯಾಂಕ್ ಖಾತೆ ವಿವರಗಳು (ಪಾಸ್ಬುಕ್ ಫೋಟೋ ಕಾಪಿ)
  3. ಫಲಾನುಭವಿಯ ಜಾತಿ, ಆದಾಯ ಪ್ರಮಾಣ ಪತ್ರ
  4. ಫಲಾನುಭವಿಯ ಪತಿಯ ಹೆಸರು ಜತೆಗೆ ಆಧಾರ್ ಸಂಖ್ಯೆ
  5. ಎಪಿಎಲ್ ಅಥವಾ ಬಿಪಿಎಲ್ ಪಡಿತರ ಚೀಟಿ

ಪ್ರಸ್ತುತ ಹಣ ಬಿಡುಗಡೆ ಸ್ಟೇಟಸ್ ಏನು?
ಮಾರ್ಚ್ ತಿಂಗಳ ಕಂತಿನ ಹಣ ಈಗಾಗಲೇ ಜಮೆಯಾಗಿದೆ. ಮೇ ತಿಂಗಳ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣ ಬಿಡುಗಡೆಯಾದ ತಕ್ಷಣ ಖಾತೆಗಳಿಗೆ ಜಮೆಯಾಗಲಿದೆ. ಇದಾದ ಬಳಿಕವಷ್ಟೇ ಹೊಸ ಅರ್ಜಿ ಸಲ್ಲಿಕೆಗೆ ಅಧಿಕೃತ ಚಾಲನೆ ಸಿಗಲಿದೆ.

More like this
Related

ಜೂನ್ 19 : ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಜನ್ಮದಿನಾಚರಣೆ         

ಉಡುಪಿ:  ‌ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ...

ಶಿವಮೊಗ್ಗ:ಹೃದಯಾಘಾತದಿಂದ ಶಾಲಾ ಆವರಣದಲ್ಲಿ ಕುಸಿದು ಬಿದ್ದ 6 ವರ್ಷದ ಬಾಲಕ ಮೃತ!

ಶಿವಮೊಗ್ಗ: ಹೃದಯಾಘಾತದಿಂದ 6 ವರ್ಷದ ಬಾಲಕ ಮೃತಪಟ್ಟ ಘಟನೆ ಸಾಗರ ತಾಲೂಕಿನ...

ಮಣಿಪಾಲ| ತಪ್ಪಿದ ದುರಂತ: ಶಾಲಾ ಬಸ್ ಚಾಲಕನಿಗೆ ಹೃದಯಾಘಾತ

ಮಣಿಪಾಲ: ಚಲಿಸುತ್ತಿದ್ದ ಶಾಲಾ ಬಸ್ಸಿನ ಚಾಲಕನಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದರೂ, ಅವರ...

Copying is disabled on Udupi Digital News.