ಮಣಿಪಾಲ: ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನಗಳ ಮೇಲೆ ಪಟಾಕಿಗಳನ್ನು ಎಸೆದು ಉಪಟಳ ಉಂಟುಮಾಡಿದ ಆರೋಪದ ಮೇಲೆ ಐವರು ಹೆಸರಿಸಲಾದ ವ್ಯಕ್ತಿಗಳು ಸೇರಿದಂತೆ ಒಟ್ಟು 20 ಮಂದಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಆರ್ಯನ್ ಕುಮಾರ್, ಆದಿತ್ಯ ಪ್ರಜಾಪತಿ, ಪ್ರಿಯಾಂಶ್, ಸಿದ್ದಾಂತ್ ಸಿಂಗ್ ಹಾಗೂ ಪ್ರಿಯಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಇವರೊಂದಿಗೆ ಇತರ 15 ಮಂದಿ ಸೇರಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನ.8ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್ ಅಪಾರ್ಟ್ಮೆಂಟ್ ಎದುರಿನ ಸಾರ್ವಜನಿಕ ರಸ್ತೆಯಲ್ಲಿ 15ರಿಂದ 20 ಮಂದಿ ಗುಂಪುಗೂಡಿ ಬೇಜವಾಬ್ದಾರಿಯಿಂದ ಪಟಾಕಿ ಸಿಡಿಸುತ್ತಿದ್ದರು ಎನ್ನಲಾಗಿದೆ. ಕೈಯಲ್ಲಿ ಪಟಾಕಿ ಹಿಡಿದು ಹಚ್ಚಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಹಾಗೂ ವಾಹನಗಳ ಮೇಲೆ ಎಸೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದರಿಂದ ಸಾರ್ವಜನಿಕರಾದ ಅನಿಲ್, ಕೀರ್ತಿ, ಡೆನಿಸ್ ರವಿ ಶೆಟ್ಟಿ ಹಾಗೂ ಜ್ಞಾನೇಶ್ವರ್ ಅವರಿಗೆ ತೊಂದರೆಯಾಗಿದ್ದು, ಅವರು ಘಟನೆಯ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕರ್ತವ್ಯದಲ್ಲಿದ್ದ ಸಮವಸ್ತ್ರಧಾರಿ ಪೊಲೀಸರ ಸೂಚನೆಗಳನ್ನು ಪಾಲಿಸದೆ ಅವರತ್ತಲೂ ಪಟಾಕಿ ಎಸೆದು ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಎಂ.ಇ. ಅವರು ದೂರು ನೀಡಿದ್ದು, ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.




