ಉಚ್ಚಿಲ: ಶ್ರೀ ಕ್ಷೇತ್ರ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 18ರಂದು ಪ್ರಪ್ರಥಮ ಬಾರಿಗೆ ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ ‘ಅಬ್ಬರದ ಪಿಲಿ ಪಂಥ 2026 – ಸೀಸನ್ 1’ ನಡೆಯಲಿದೆ.
ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ವತಿಯಿಂದ ಉಡುಪಿ ಉಚ್ಚಿಲ ದಸರಾ ಸಮಿತಿಯ ಸಹಯೋಗದಲ್ಲಿ ನಡೆಯಲಿರುವ ಈ ಸ್ಪರ್ಧೆಯು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಉತ್ಸವದ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ 10.30ರಿಂದ ಆರಂಭಗೊಳ್ಳಲಿದೆ.

ಸ್ಪರ್ಧೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರತಿಷ್ಠಿತ 10 ಆಹ್ವಾನಿತ ಹುಲಿ ಕುಣಿತ ತಂಡಗಳು ಭಾಗವಹಿಸಲಿವೆ.
ಸ್ಪರ್ಧೆಯ ಪ್ರಥಮ ಬಹುಮಾನವಾಗಿ ₹3 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ₹2 ಲಕ್ಷ ನಗದು ಹಾಗೂ ಟ್ರೋಫಿ ಮತ್ತು ತೃತೀಯ ಬಹುಮಾನವಾಗಿ ₹1 ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ಮೂರು ವೈಯಕ್ತಿಕ ವಿಭಾಗಗಳಲ್ಲಿ ತಲಾ ₹10 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ₹25 ಸಾವಿರ ಪ್ರೋತ್ಸಾಹಧನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕರಾವಳಿ ಕರ್ನಾಟಕದ ವಿಶಿಷ್ಟ ಜನಪದ ಹಾಗೂ ಸಾಂಸ್ಕೃತಿಕ ಪರಂಪರೆಯಾದ ಹುಲಿ ಕುಣಿತ ಕಲೆಗೆ ಹೊಸ ವೇದಿಕೆ ಕಲ್ಪಿಸಿ, ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.




