Thursday, October 8, 2026

ಬಳ್ಕೂರು–ಕಂಡ್ಲೂರು ಸೇತುವೆ ತೆರವು ವಿರೋಧಿಸಿ ಹೋರಾಟ: ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. 

ಕುಂದಾಪುರ: ಬಳ್ಕೂರು–ಕಂಡ್ಲೂರು ಸೇತುವೆ ತೆರವುಗೊಳಿಸಿದರೆ ಸ್ಥಳೀಯರಿಗೆ ಎದುರಾಗುವ ಸಮಸ್ಯೆಗಳ ಕುರಿತು ಸೇತುವೆ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಹೋರಾಟಗಾರರು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಗಮನಕ್ಕೆ ತಂದರು.

ಗುರುವಾರ ಬೆಳಗ್ಗೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆಯವರನ್ನು ಭೇಟಿಯಾದ ಹೋರಾಟಗಾರರು, ಸೇತುವೆ ತೆರವುಗೊಳಿಸಿದರೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಸೇತುವೆ ಆಸುಪಾಸಿನ ಗ್ರಾಮಗಳ ಜನರು ಎದುರಿಸಬೇಕಾಗುವ ತೊಂದರೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹೆಗ್ಡೆಯವರು ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ನಂತರ ಹೋರಾಟಗಾರರು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಭೇಟಿಯಾಗಿ ಸೇತುವೆ ತೆರವುಗೊಳಿಸುವುದರಿಂದ ಉಂಟಾಗುವ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಸಂಜೆ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಅದರಂತೆ ಸಂಜೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಹೆಗ್ಡೆಯವರು ಹಾಗೂ ಹೋರಾಟಗಾರರಿಂದ ಸೇತುವೆ ತೆರವುಗೊಳಿಸಿದರೆ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಯವರು ಮಾಹಿತಿ ಪಡೆದುಕೊಂಡರು.

ಸೇತುವೆ ತೆರವುಗೊಂಡರೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಕೆ. ಜಯಪ್ರಕಾಶ್ ಹೆಗ್ಡೆಯವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ಪರ್ಯಾಯ ಮಾರ್ಗದ ವ್ಯವಸ್ಥೆಯ ಸಾಧ್ಯತೆಗಳನ್ನೂ ಜಿಲ್ಲಾಧಿಕಾರಿಯವರು ಹೋರಾಟಗಾರರೊಂದಿಗೆ ಪರಿಶೀಲಿಸಿದರು. ಪರ್ಯಾಯ ರಸ್ತೆಯಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ ವೇಳೆ ಅದು ಏಕಮುಖ ರಸ್ತೆಯಾಗಿದ್ದು, ಸುಮಾರು 20 ಕಿ.ಮೀ. ಸುತ್ತುವರಿದು ಸಂಚರಿಸಬೇಕಾಗುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಲಿದೆ ಎಂಬುದನ್ನು ಜಿಲ್ಲಾಧಿಕಾರಿಯವರು ಮನಗಂಡರು.

ಸ್ಥಳೀಯರ ಸಮಸ್ಯೆಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿಯವರ ಸ್ಪಂದನೆಗೆ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಬಳ್ಕೂರು–ಕಂಡ್ಲೂರು ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಹೋರಾಟದ ಪ್ರಮುಖರಾದ ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ದೇವಾನಂದ ಶೆಟ್ಟಿ ಹಳ್ನಾಡು, ಸಾಮ್ರಾಟ್ ಶೆಟ್ಟಿ ಹಳ್ನಾಡು, ನಿಶ್ಚಿತ್ ಶೆಟ್ಟಿ ಬಳ್ಕೂರು, ಕಾಮರಾಜ್ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ದಿನಕರ್ ಶೆಟ್ಟಿ ಮುಂಬಾರು, ಕಿರಣ್ ಹೆಗ್ಡೆ ಅಂಪಾರು, ಅಶೋಕ್ ಕೆ. ಅಂಪಾರು, ವಿಜಯ್ ಪುತ್ರನ್ ಕಂಡ್ಲೂರು, ಸಂತೋಷ್ ಶೆಟ್ಟಿ ಬಲಾಡಿ ಸೇರಿದಂತೆ  ಹೋರಾಟಗಾರರು ಉಪಸ್ಥಿತರಿದ್ದರು.

More like this
Related

2027ರ ವಿಧಾನಸಭಾ ಚುನಾವಣೆ: ಯುಪಿಯಲ್ಲಿ ಉಗ್ರ ದಾಳಿ, ಪಂಜಾಬ್‌ನಲ್ಲಿ ಮಾದಕ ವಸ್ತು, ಮಣಿಪುರದಲ್ಲಿ ಅಶಾಂತಿ ಸೃಷ್ಟಿಸಲು ISI ಸಂಚು?

ನವದೆಹಲಿ: 2027ರ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು...

ಕುಂದಾಪುರ ರೋಜರಿ ಮಾತೆಯ 456ನೇ ವಾರ್ಷಿಕ ಹಬ್ಬ

ಕುಂದಾಪುರ : ಉಡುಪಿ ಧರ್ಮಪ್ರಾಂತ್ಯದ ಐತಿಹಾಸಿಕ ಹಿನ್ನೆಲೆಯುಳ್ಳ ಕುಂದಾಪುರ ರೋಜರಿ ಮಾತೆಯ...

ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ನಿಧನ

ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಹಾಗೂ ಹಿರಿಯ ನಟ ನಾನಾ ಪಾಟೇಕರ್...

ಕುಂದಾಪುರ ಸುಜ್ಞಾನ ಪಿಯು ಕಾಲೇಜಿನಲ್ಲಿ ವಿಜಯದಶಮಿ ವಿಶೇಷ ಪ್ರವೇಶಾತಿ ಕೊಡುಗೆ

ಕುಂದಾಪುರ: ಸುಜ್ಞಾನ ಎಜುಕೇಷನಲ್ ಟ್ರಸ್ಟ್ನ ಅಂಗಸಂಸ್ಥೆಯಾದ ಸುಜ್ಞಾನ ಪಿಯು ಕಾಲೇಜಿನಲ್ಲಿ ಪ್ರಥಮ...

Copying is disabled on Udupi Digital News.