ಕುಂದಾಪುರ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿರುವ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಇದು ರಾಜಕೀಯ ಭಿನ್ನಾಭಿಪ್ರಾಯದ ಎಲ್ಲ ಮಿತಿಗಳನ್ನು ಮೀರಿ ಮಾನವೀಯತೆ ಹಾಗೂ ಸಂವಿಧಾನದ ಮೌಲ್ಯಗಳಿಗೆ ಮಾಡಿರುವ ಅವಮಾನ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಮಧ್ಯಾಹ್ನ ನಗರದ ಶಾಸ್ತ್ರಿ ಸರ್ಕಲ್ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಖರ್ಗೆ ಬಿಜೆಪಿಗರ ರಾಜಕೀಯ ವಿರೋಧಿಯಾಗಿರಬಹುದು. ಅವರ ವಿಚಾರಧಾರೆಗಳನ್ನು ಬಿಜೆಪಿ ಹಾಗೂ ಆರ್ಎಸ್ಎಸ್ ವಿರೋಧಿಸಬಹುದು. ಆದರೆ ಅವರು ಭಾಷಣ ಮಾಡಿದ ಸ್ಥಳವನ್ನೇ ಶುದ್ಧೀಕರಿಸುವ ಮೂಲಕ ಅವಮಾನಿಸುವುದು ಯಾವ ರೀತಿಯ ರಾಜಕೀಯ ಸಂಸ್ಕೃತಿ ಎಂದು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆ ನಿಂತು ಭಾಷಣ ಮಾಡಿದ ಜಾಗವನ್ನು ಶುದ್ಧೀಕರಿಸುವ ಮನೋಭಾವ ರಾಜಕೀಯ ಅಸಹಿಷ್ಣುತೆಯ ಸಂಕೇತ. ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ. ಮಾನವೀಯತೆಯನ್ನೇ ಅವಮಾನಿಸುವ ನಡೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಪ್ರತಿಯೊಬ್ಬ ನಾಗರಿಕನಿಗೂ ಪ್ರತಿಭಟನೆ ನಡೆಸುವ ಹಾಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನೀಡಿದೆ. ಹಾಗಾದರೆ ಅಂಬೇಡ್ಕರ್ ನೀಡಿದ ಸಂವಿಧಾನವನ್ನೇ ತೊಳೆಯಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ದಶಕಗಳ ಸಾರ್ವಜನಿಕ ಜೀವನದ ಅನುಭವ ಹೊಂದಿದ್ದಾರೆ. ಇಂತಹ ಹಿರಿಯ ನಾಯಕರಿಗೆ ಗೌರವ ನೀಡುವುದು ಪ್ರಜಾಪ್ರಭುತ್ವದ ರಾಜಕೀಯ ಸಂಸ್ಕೃತಿಯ ಭಾಗವಾಗಬೇಕು. ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾದರೂ, ಅವು ವೈಯಕ್ತಿಕ ಅವಮಾನಕ್ಕೆ ಕಾರಣವಾಗಬಾರದು ಎಂದು ಮುರೊಳ್ಳಿ ಹೇಳಿದರು.
ಖರ್ಗೆ ಅವರಿಗೆ ಅವಮಾನವಾಗಿರುವುದನ್ನು ಜಿಲ್ಲೆಯ ಬಿಜೆಪಿ ನಾಯಕರು ಖಂಡಿಸಬೇಕು. ರಾಜಕೀಯ ಭಿನ್ನಾಭಿಪ್ರಾಯ ಬೇರೆ. ಆದರೆ ಹಿರಿಯ ನಾಯಕರಿಗೆ ಆಗುವ ಅವಮಾನವನ್ನು ಖಂಡಿಸುವ ಕನಿಷ್ಠ ರಾಜಕೀಯ ಸಭ್ಯತೆಯನ್ನು ಅವರು ಪ್ರದರ್ಶಿಸಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಂಜುನಾಥ ಗಿಳಿಯಾರ್, ರಾಜು ಬೆಟ್ಟಿನಮನೆ, ಜಗದೀಶ್ ಗಂಗೊಳ್ಳಿ, ಗಣೇಶ್ ಕೊರಗ, ಅಶ್ವಥ್ ಕುಮಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ವಿನೋದ್ ಕ್ರಾಸ್ತ, ದೇವಕಿ ಸಣ್ಣಯ್ಯ, ಆಶಾ ಕರ್ವಾಲೋ, ಜ್ಯೋತಿ ಪುತ್ರನ್, ಇಚ್ಚಿತಾರ್ಥ್ ಶೆಟ್ಟಿ, ರೋಶನ್ ಶೆಟ್ಟಿ, ಅಶ್ವಥ್ ಶೆಟ್ಟಿ, ನಾಗೇಂದ್ರ, ಪುರಸಭೆ, ಗ್ರಾ.ಪಂ. ಮಾಜಿ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನೆಯ ಬಳಿಕ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಮಿನಿವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಗ್ರೇಡ್ -2 ವಸಂತ್ ಅವರಿಗೆ ಮನವಿ ನೀಡಿದರು.




