ಯುಡಿ ನ್ಯೂಸ್ ಡಾಟ್ ಕಾಮ್
ಕುಂದಾಪುರ: ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಸ್ವತಿ ವಿದ್ಯಾಲಯವು ಶೇ. 100 ಫಲಿತಾಂಶದ ಜೊತೆಗೆ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ್ಯಾಂಕ್ ಗಳಿಸಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಸಿದ್ಧಾಪುರ ಇದರ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಹೇಳಿದರು.
ಈ ಕುರಿತು ಶಾಲೆಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕುಂದಾಪುರ ತಾಲೂಕಿನ ಸಿದ್ದಾಪುರದ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಪ್ರವರ್ತಿತ ಸರಸ್ವತಿ ವಿದ್ಯಾಲಯದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. 2001ರಲ್ಲಿ ದಕ್ಕೇರಬಾಳು ಶ್ರೀನಿವಾಸ ಕಾಮತ್ ಅವರು ವೆಂಕಟರಮಣ ಎಜುಕೇಶನಲ್ ಟ್ರಸ್ಟ್ ಅಡಿಯಲ್ಲಿ ಸ್ಥಾಪಿಸಿದ ಸರಸ್ಕೃತಿ ವಿದ್ಯಾಲಯ ಆಂಗ್ಲಮಾಧ್ಯಮ ಪ್ರೌಢ ಶಾಲೆಯನ್ನು 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದು, ನಿರಂತರವಾದ ಅಧ್ಯಯನ, ಅನುಭವಿ ಆಡಳಿತ ಮಂಡಳಿ ಹಾಗೂ ಮುಖ್ಯೋಪಾದ್ಯಾಯರು, ಉತ್ತಮ ಬೋಧಕ ವೃಂದ, ಸುಸಜ್ಜಿತ ಶಾಲಾ ಸೌಲಭ್ಯಗಳಿಂದಾಗಿ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದರು.
ಪರೀಕ್ಷೆಗೆ ಕುಳಿತವರ ಪೈಕಿ ಶಿವಾನಿ ಶೆಟ್ಟಿ 617 ಅಂಕಗಳನ್ನು ಪಡೆದು ಶೇ. 98.72 ಫಲಿತಾಂಶದ ಜೊತೆಗೆ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ಇನ್ನೋರ್ವ ವಿದ್ಯಾರ್ಥಿನಿ ಆಯಿಷಾ ತನಾಝ್ 616 ಅಂಕಗಳನ್ನು ಪಡೆದು ಶೇ. 98.56 ಫಲಿತಾಂಶದೊಂದಿಗೆ ರಾಜ್ಯಕ್ಕೆ 10 ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ಜೊತೆಗೆ 28 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 7 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೆ. 95.48 ಗುಣಾತ್ಮಕ ಫಲಿತಾಂಶದೊಂದಿಗೆ ಉತ್ತಮ ಫಲಿತಾಂಶ ಬಂದಿರುವುದು ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದ ಅವರು, ಇನ್ನು ಕೆಲವು ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಹಾಗೂ ಎರಡನೇ ಪರೀಕ್ಷೆಗೆ ಹಾಜರಾಗುವ ತಯಾರಿ ನಡೆಸುತ್ತಿದ್ದು, ಹೆಚ್ಚಿನ ಫಲಿತಾಂಶ ನಿರೀಕ್ಷಿಸುತ್ತಿದ್ದೇವೆ ಎಂದರು.
ಶಾಲೆಯಲ್ಲಿ ಸುಸಜ್ಜಿತ ಸೌಲಭ್ಯಗಳು, ಲ್ಯಾಬೊರೇಟರಿಗಳು, ಗ್ರಂಥಾಲಯ, ಆಟದ ಮೈದಾನ, ತರಗತಿ ಕೋಣೆಗಳನ್ನು ಹೊಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ಕೂಲ್ ಬಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಅನುಭವಿ ಮತ್ತು ನುರಿತ ಶಿಕ್ಷಕರನ್ನು ನಮ್ಮ ಶಾಲೆ ಹೊಂದಿದೆ. ಮುಖ್ಯೋಪಾದ್ಯಾಯಿನಿ ಶ್ವೇತಾ ಗಣೇಶ್ ಅವರು ಶಾಲೆಯನ್ನು ಮುನ್ನಡೆಸುವ ಸಾರಥ್ಯವನ್ನು ವಹಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುಮುಖ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಜ್ಞಾನಸರಸ್ಕೃತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ, ಸರಸ್ವತಿ ವಿದ್ಯಾಲಯದ ಮುಖ್ಯೋಪಾದ್ಯಾಯಿನಿ ಶ್ವೇತಾ ಗಣೇಶ್ ಉಪಸ್ಥಿತರಿದ್ದರು.




