Monday, April 27, 2026

ಧರ್ಮದ ಜೀವನವೇ ಸಾರ್ಥಕತೆಗೆ ದಾರಿ: ವಿಧುಶೇಖರ ಭಾರತೀ ಮಹಾಸ್ವಾಮೀಜಿ

ಯುಡಿ ನ್ಯೂಸ್ ಡಾಟ್ ಕಾಮ್

ಕುಂದಾಪುರ: ಮನುಷ್ಯ ಜೀವನವನ್ನು ಸಾರ್ಥಕತೆ ಮಾಡಿಕೊಳ್ಳಬೇಕಾದರೆ ಪರಮಾತ್ಮನ ಅನುಗ್ರಹ ಅಗತ್ಯ. ಧರ್ಮದ ಜೀವನವೇ ಸಾರ್ಥಕತೆಗೆ ದಾರಿ. ಎಲ್ಲರೂ ಬಯಸೋದು ಸುಖ. ಆ ಸುಖ ಪಡೆಯುವ ಏಕೈಕ ಮಾರ್ಗವೆಂದರೆ ಅದು ನಮ್ಮ ಸನಾತನ ಹಿಂದೂ ಧರ್ಮದ ಮಾರ್ಗ. ಹಿಂದೂ ಧರ್ಮದಲ್ಲಿ ಮಾತ್ರ ಪುರಾಣ, ವೇದ, ಶಾಸ್ತ್ರ, ಗ್ರಂಥ, ವ್ಯಾಖ್ಯಾನ, ಘೋಷ ಎಲ್ಲವೂ ಇದೆ. ವಿಶಿಷ್ಟ ಪರಂಪರೆಯ ನಮ್ಮ ಸನಾತನ ಧರ್ಮದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಆಶೀರ್ವಚಿಸಿದರು.

ಅವರು ಶುಕ್ರವಾರ ಆಲೂರಿನ ಸುಮಾರು 800 ವರ್ಷಗಳಷ್ಟು ಪುರಾತನ ಇತಿಹಾಸವಿರುವ ಶ್ರೀ ರಾಮೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇವಸ್ಥಾನ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿ, ಆಶೀರ್ವಚನ ನೀಡಿದರು.

ದೇಶ, ರಾ‍ಜ್ಯದಲ್ಲಿ ಕರಾವಳಿ ಪ್ರದೇಶದ ಸಂಸ್ಕೃತಿ, ಧರ್ಮನಿಷ್ಠೆಗೆ ವಿಶಿಷ್ಠವಾದ ಇತಿಹಾಸವಿದೆ. ಪ್ರಾಚೀನ ಕಾಲದಿಂದಲೂ ಅದಕ್ಕೆ ಹೆಸರುವಾಸಿಯಾಗಿದೆ. ಅದಕ್ಕೆ ಮುಖ್ಯ ಕಾರಣ ಇಲ್ಲಿನ ಅನೇಕ ಶತಮಾನಗಳಿಂದ ಇರುವಂತಹ ಕ್ಷೇತ್ರಗಳು, ದೇವಸ್ಥಾನಗಳು. ಆಲೂರಲ್ಲಿ ಪುರಾತನ ರಾಮೇಶ್ವರನ ದೇವಸ್ಥಾನ ಹಳೆಯ ವೈಭವವನ್ನು ಮತ್ತೆ ತರಲು ಭಗವಂತನ ಪ್ರೇರಣೆಯಂತೆ ಮುಂದಡಿಯಿಟ್ಟಿದ್ದೀರಿ. ಎಲ್ಲರೂ ಐಕ್ಯಮತ ಹೊಂದಿ, ಸಂಕಲ್ಪ ಮಾಡಿ. ಆದಷ್ಟು ಬೇಗ ಕಾರ್ಯಗತಗೊಳ್ಳುತ್ತದೆ. ಆಲಯಗಳ ಜೀರ್ಣೋದ್ದಾರ ನಾವು ಮಾಡುವ ಉತ್ಕೃಷ್ಟ ಕಾರ್ಯ. ಇದು ಭಗವಂತನ ಸೇವೆ. ಇನ್ನೊಬ್ಬರಿಗೆ ಉಪಕಾರ ಮಾಡುವುದು ಕೂಡ ನಮ್ಮ ಧರ್ಮ. ಅದು ಕೂಡ ದೇವರ ಸೇವೆಯೇ ಆಗಿದೆ ಎಂದವರು ನುಡಿದರು.

ಉದ್ಯಮಿ, ದಾನಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಮಾತನಾಡಿ, ದೇವಸ್ಥಾನ ಹಾಗೂ ಶಾಲೆಗಳು ಅಭಿವೃದ್ಧಿಯಾದರೆ ಆ ಊರೇ ಉದ್ದಾರವಾದಂತೆ. ಇಲ್ಲಿ ಶಾಲೆ ಅಭಿವೃದ್ಧಿಯಾಗಿದೆ. ಈಗ ದೇವಸ್ಥಾನವೂ ಅಭಿವೃದ್ಧಿಯಾಗುತ್ತಿದೆ. ಇದು ಒಳ್ಳೆಯ ಕಾರ್ಯ ಎಂದರು.

800 ವರ್ಷಗಳಷ್ಟು ಹಳೆಯ ದೇವಸ್ಥಾನವನ್ನು ಮತ್ತೆ ಜೀರ್ಣೋದ್ಧಾರ ಮಾಡಿ, ದೇವರಿಗೆ ಪೂಜಾ ಕೈಂಕರ್ಯ ಮಾಡಲು ಊರವರೆಲ್ಲ ಒಟ್ಟಾಗಿರುವುದು ಒಳ್ಳೆಯ ವಿಚಾರ. ಇದರಿಂದ ಊರಿಗೂ ಶ್ರೇಯಸ್ಸು ಸಿಗಲಿ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹಾರೈಸಿದರು.

ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಬೆಂಗಳೂರು ದೇವಾಡಿಗರ ಸಂಘದ ಅಧ್ಯಕ್ಷ ರಮೇಶ ದೇವಾಡಿಗ ಮಾತನಾಡಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ ಕಾರಂತ್, ಉದ್ಯಮಿ ಅಶೋಕ್ ಶೆಟ್ಟಿ ಬೆಳ್ಳಾಡಿ, ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ್ ಅಡಿಗ, ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಎಸ್. ಮಹಾಬಲ ಜೋಯಿಸ್ ಮತ್ತಿತರರು ಉಪಸ್ಥಿತರಿದ್ದರು.

ಕೊಲ್ಲೂರಿನ ಅರ್ಚಕರಾದ ಸುಬ್ರಹ್ಮಣ್ಯ ಅಡಿಗ ಪ್ರಸ್ತಾವಿಸಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಘುರಾಮ ದೇವಾಡಿಗ ಆಲೂರು ಸ್ವಾಗತಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

More like this
Related

ಹೀಟ್​ ವೇವ್​ ಅಬ್ಬರ: ದೇಶವನ್ನೇ ಸುಡುತ್ತಿದೆ ಬೆಂಕಿ ಬಿಸಿಲು!

ಯುಡಿ ನ್ಯೂಸ್ ಡಾಟ್ ಕಾಮ್ ನವದೆಹಲಿ: ಭಾರತದಲ್ಲಿ ಹೀಟ್​ ವೇವ್​ ಅಬ್ಬರ ದಿನದಿಂದ ದಿನಕ್ಕೆ...

ಇರಾನ್ ದಾಳಿ: ಇಸ್ರೇಲ್ ನೆರವು ಕೋರಿದ UAE!

ಯುಡಿ ನ್ಯೂಸ್ ಡಾಟ್ ಕಾಮ್ ಅಬುದಾಬಿ: ಗಲ್ಫ್ ದೇಶದ ಮೇಲೆ ಇರಾನ್ ದಾಳಿ ಮಾಡಿದ...

ರಿಂಕು, ನರೈನ್‌ ಮಿಂಚು: ಲಖನೌ ಎದುರು ಸೂಪರ್‌ ಓವರ್‌ ನಲ್ಲಿ ಗೆದ್ದು ಬೀಗಿದ ಕೋಲ್ಕತ್ತಾ

ಯುಡಿ ನ್ಯೂಸ್ ಡಾಟ್ ಕಾಮ್ ಲಖನೌ: ಭಾನುವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್...

ತೊಟ್ಟಂ ಚರ್ಚಿನಿಂದ ವರ್ಗಾವಣೆಗೊಂಡ ವಂ|ಡೆನಿಸ್ ಡೆಸಾ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಉಡುಪಿ: ಜಾತಿ ಧರ್ಮದ ಗೋಡೆಗಳನ್ನು ಕೆಡವಿ ಸರ್ವ ಜನಾಂಗದ ಶಾಂತಿಯ ತೋಟವನ್ನು...

Copying is disabled on Udupi Digital News.