ಉಡುಪಿ: ಏಳು ದಿನಗಳ ಕಾಲ ಕಡಿಯಾಳಿಯಲ್ಲಿ ರಾಜ ದರ್ಬಾರ್ ನಡೆಸಿ ಸಾವಿರಾರು ಭಕ್ತರ ಕಷ್ಟ-ಸಂಕಷ್ಟಗಳನ್ನು ಆಲಿಸಿ, ಮನೆ-ಮನಗಳಲ್ಲಿ ಭಕ್ತಿ, ಸಂಭ್ರಮ ಹಾಗೂ ಆಶಾಭಾವ ಮೂಡಿಸಿದ್ದ ಕಡಿಯಾಳಿಯ ಸಂಕಷ್ಟಹರ ಗಣೇಶನಿಗೆ ಭಕ್ತಿಪೂರ್ವಕವಾಗಿ ಬೀಳ್ಕೊಡಲಾಯಿತು. ರಾಜನಂತೆ ಆರಾಧಿಸಲ್ಪಟ್ಟ ಉಡುಪಿಯ ರಾಜನ ವಿಸರ್ಜನಾ ಮೆರವಣಿಗೆ ಭಕ್ತರ ಸಾಗರದ ನಡುವೆ ಅದ್ದೂರಿಯಾಗಿ ನಡೆಯಿತು.


ಕಡಿಯಾಳಿಯ ಕಾತ್ಯಾಯಿನಿ ಮಂಟಪದಲ್ಲಿ ಮಹಾ ಮಂಗಳಾರತಿಯ ಬಳಿಕ ಮೆರವಣಿಗೆ ಆರಂಭಗೊಂಡಿತು. ಭಕ್ತರು ಪುಷ್ಪವೃಷ್ಟಿ ಮೂಲಕ ಉಡುಪಿಯ ರಾಜನಿಗೆ ಗೌರವ ಸಲ್ಲಿಸಿದರು. ‘ಗಣಪತಿ ಬಪ್ಪಾ ಮೋರಿಯಾ’ ಘೋಷಣೆಗಳೊಂದಿಗೆ ಕಡಿಯಾಳಿಯಿಂದ ಕಲ್ಸಂಕ ಮಾರ್ಗವಾಗಿ ಸಾಗಿದ ಮೆರವಣಿಗೆ ಶ್ರೀಕೃಷ್ಣ ಮಠ ತಲುಪಿತು. ಶ್ರೀಕೃಷ್ಣನ ಸನ್ನಿಧಿಗೆ ಆಗಮಿಸಿದ ಸಂಕಷ್ಟಹರ ಗಣೇಶನಿಗೆ ಪರ್ಯಾಯ ಶಿರೂರು ಶ್ರೀಗಳು ಮಹಾ ಮಂಗಳಾರತಿ ಬೆಳಗಿಸಿ ಪೂಜೆ ಸಲ್ಲಿಸಿದರು.

ಬಳಿಕ ಡಯಾನ ಸರ್ಕಲ್, ಸಿಟಿ ಬಸ್ ನಿಲ್ದಾಣ ಹಾಗೂ ಬನ್ನಂಜೆ ಮಾರ್ಗವಾಗಿ ಮಲ್ಪೆ ಕಡಲತೀರದತ್ತ ಮೆರವಣಿಗೆ ಸಾಗಿತು. ಮಾರ್ಗದುದ್ದಕ್ಕೂ ಮನೆಗಳ ಮುಂದೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು ಗಣೇಶನ ದರ್ಶನ ಪಡೆದು ಪುಷ್ಪಾರ್ಚನೆ ಸಲ್ಲಿಸಿದರು. ಹಲವರು ಕೈಮುಗಿದು ಪ್ರಾರ್ಥಿಸಿದರೆ, ಇನ್ನು ಕೆಲವರು ಮೊಬೈಲ್‌ಗಳಲ್ಲಿ ಈ ಅಪೂರ್ವ ಕ್ಷಣಗಳನ್ನು ಸೆರೆಹಿಡಿದರು.


ಕಲಾ ವೈಭವದಿಂದ ಕಳೆಗಟ್ಟಿದ ಮೆರವಣಿಗೆ
ವಿಸರ್ಜನಾ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳು ಗಮನ ಸೆಳೆದವು. ಚೆಂಡೆ ವಾದನದ ಮೊಳಗುವ ನಾದ, ರಕ್ಕಸ ವೇಷಧಾರಿಗಳ ಆಕರ್ಷಕ ಪ್ರದರ್ಶನ ಸೇರಿದಂತೆ ವಿವಿಧ ಕಲಾ ತಂಡಗಳ ವೈವಿಧ್ಯಮಯ ಪ್ರದರ್ಶನಗಳು ಮೆರವಣಿಗೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು. ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವ ಒಂದಾಗಿ ಉಡುಪಿಯ ರಾಜನ ಮೆರವಣಿಗೆಗೆ ವಿಶಿಷ್ಟ ಮೆರುಗು ನೀಡಿತು.

ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಭಕ್ತಜನ ಸಾಗರವೇ ಕಂಡುಬಂತು. ಉಡುಪಿಯ ರಾಜನ ದರ್ಶನ ಪಡೆಯಲು ಕಾತರರಾಗಿದ್ದ ಭಕ್ತರು ಭಕ್ತಿಭಾವದಿಂದ ಕೈಮುಗಿದು ಪ್ರಾರ್ಥಿಸಿದರು. ಏಳು ದಿನಗಳ ಕಾಲ ತಮ್ಮ ಮನೆ-ಮನಗಳಲ್ಲಿ ನೆಲೆಸಿದ್ದ ಗಣೇಶನನ್ನು ಬೀಳ್ಕೊಡುವ ವೇಳೆ ಹಲವರ ಕಣ್ಣಲ್ಲಿ ಭಾವನೆಗಳು ಮಡುಗಟ್ಟಿದ್ದವು.

ಮಲ್ಪೆಯ ಸೀ ವಾಕ್‌ವೇ ಸಮೀಪ ಸಂಕಷ್ಟಹರ ಗಣೇಶನಿಗೆ ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ಬಳಿಕ ಭಕ್ತರ ಜಯಘೋಷಗಳ ನಡುವೆ ಉಡುಪಿಯ ರಾಜನ ವಿಗ್ರಹವನ್ನು ಮಲ್ಪೆ ಕಡಲಿನಲ್ಲಿ ವಿಸರ್ಜಿಸಲಾಯಿತು.

ಏಳು ದಿನಗಳ ಕಾಲ ಭಕ್ತರ ಕಷ್ಟ-ಸಂಕಷ್ಟಗಳನ್ನು ದೂರಮಾಡುವ ಸಂಕಲ್ಪದೊಂದಿಗೆ ಆರಾಧಿಸಲ್ಪಟ್ಟ ಕಡಿಯಾಳಿಯ ಸಂಕಷ್ಟಹರ ಗಣೇಶನು ಇದೀಗ ಕಡಲಿನ ಒಡಲಿಗೆ ಸೇರಿದ್ದರೂ, ಭಕ್ತರ ಮನದಲ್ಲಿ ಮೂಡಿಸಿದ ಭಕ್ತಿ, ಭರವಸೆ ಹಾಗೂ ನೆನಪುಗಳು ಅಚ್ಚಳಿಯದೆ ಉಳಿದವು. ‘ಮತ್ತೆ ಬಾ ಗಣಪತಿ’ ಎಂಬ ಭಕ್ತರ ಹಾರೈಕೆಯೊಂದಿಗೆ ಉಡುಪಿಯ ರಾಜನ ಏಳು ದಿನಗಳ ರಾಜ ದರ್ಬಾರ್ ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿತು.




