Wednesday, July 29, 2026

ಕಥೊಲಿಕ್ ಸಭಾ ಉಡುಪಿ ಪ್ರದೇಶ ಮತ್ತು ಜಾನ್ ಡಿಸಿಲ್ವಾ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ

ಉಡುಪಿ: ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಎಷ್ಟೇ ಉನ್ನತ ಹುದ್ದೆಗೆ ಏರಿದರೂ ತಾವು ಹುಟ್ಟಿದ ಊರು ಮತ್ತು ಹೆತ್ತವರನ್ನು ಎಂದಿಗೂ ಕೂಡ ಮರೆಯಬಾರದು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅಭಿಪ್ರಾಯಪಟ್ಟರು.

ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಕೇಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ಜಾನ್ ಡಿಸಿಲ್ವಾ ಫೌಂಡೇಶನ್ ಮುಂಬೈ ಇವರ ಜಂಟಿ ಆಶ್ರಯದಲ್ಲಿ ಆಯೋಜಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಶೈಕ್ಷಣಿಕ ಭವಿಷ್ಯ ಉತ್ತಮಪಡಿಸಲು ಹೆತ್ತವರು ಶಿಕ್ಷಕರ ಪಾತ್ರ ಮಹತ್ತರವಾದದ್ದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉತ್ತಮ ಅಂಕಗಳನ್ನು ಪಡೆಯಬೇಕು. ಇಂದಿನ ಪೈಪೋಟಿ ಯುಗದಲ್ಲಿ ಉನ್ನತ ಸ್ಥಾನದಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ. ಹುಟ್ಟಿದ ಊರು ನಮ್ಮ ಅಸ್ತಿತ್ವದ ಬೇರು. ಬೆಳೆದ ಮೇಲೆ ಆ ಊರಿನ ಪ್ರಗತಿಗೆ ಕೈಲಾದಷ್ಟು ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ. ಯಶಸ್ಸಿನ ಜೊತೆಗೆ ಮಾನವೀಯ ಮೌಲ್ಯಗಳು ಮತ್ತು ಕೃತಜ್ಞತಾ ಭಾವನೆ ಇದ್ದಾಗ ಮಾತ್ರ ಆ ಶಿಕ್ಷಣಕ್ಕೆ ನಿಜವಾದ ಸಾರ್ಥಕತೆ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಜಸಿಂತಾ ಡಿಸೋಜಾ ಮಾತನಾಡಿ. ಮಕ್ಕಳಿಗೆ ತಮ್ಮ ಭವಿಷ್ಯದ ಕ್ಷೇತ್ರವನ್ನು ಆಯ್ಕೆಯನ್ನು ಮಾಡಿಕೊಳ್ಳಲು ಹೆತ್ತವರು ಮುಕ್ತ ಅವಕಾಶ ನೀಡಬೇಕು. ಅವರಲ್ಲಿ ಒತ್ತಡ ಹೇರದೆ ಅವರ ಅಪೇಕ್ಷೆಯ ವಿಷಯಕ್ಕೆ ಅವಕಾಶ ನೀಡಿದಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಫೌಂಡೇಶನ್ ಇದರ ಮುಖ್ಯಸ್ಥರಾದ ಜೋನ್ ಡಿಸಿಲ್ವಾ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿ ಉತ್ತಮ ಭವಿಷ್ಯವನ್ನು ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐವರು, ಪಿಹೆಚ್ ಡಿ ಪದವಿ ಪಡೆದ ಏಳು ಮಂದಿ ಹಾಗೂ ಧರ್ಮಪ್ರಾಂತ್ಯದ 52 ಚರ್ಚುಗಳಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷರಾದ ಮೆಲ್ವಿನ್ ಆರಾನ್ಹಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ಲಾಡಿಸ್ ಡಿಸಿಲ್ವಾ, ನಿಕಟಪೂರ್ವ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ, ಕೋಶಾಧಿಕಾರಿ ಉರ್ಬಾನ್ ಲೂವಿಸ್, ಮಾಜಿ ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ, ವಲೇರಿಯನ್ ಫೆರ್ನಾಂಡಿಸ್, ಆಲ್ವಿನ್ ಕ್ವಾಡ್ರಸ್, ಸಂತೋಷ್ ಕರ್ನೆಲಿಯೋ ಪದಾಧಿಕಾರಿಗಳಾದ ಲೂಯಿಸ್ ಡಿಸೋಜಾ, ಸೋನು ಸಿಕ್ವೇರಾ, ತಿಯೋದರ್ ಮೆಂಡೊನ್ಸಾ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕರಾದ ಡಾ. ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಕಾರ್ಯದರ್ಶಿ ಜುಲಿಯೇಟ್ ಡಿಸೋಜಾ ವಂದಿಸಿದರು. ಅಲನಿ ದಾಂತಿ ಕಾರ್ಯಕ್ರಮ ನಿರೂಪಿಸಿದರು.

More like this
Related

ಧ್ವೇಷ ಭಾಷಣ ಪ್ರಕರಣ: ಶಾಸಕ ಯಶ್‌ಪಾಲ್‌ ಸುವರ್ಣಗೆ ಪೊಲೀಸರಿಂದ ನೋಟಿಸ್

ಉಡುಪಿ: ದ್ವೇಷ ಭಾಷಣ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ...

ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ಗೆ ರಾಷ್ಟ್ರಮಟ್ಟದ ‘ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್–2026’ ಗೌರವ

ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಡಾ. ಸುಕಾಂತ್ ಮಜುಂದಾರ್ ಅವರಿಂದ...

ಯಶ್ಪಾಲ್ ಸುವರ್ಣ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು

ಕುಂದಾಪುರ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ...

ಯಶ್ಪಾಲ್ ಸುವರ್ಣ ವಿರುದ್ಧ ಕಠಿಣ ಕಾನೂನು ಕ್ರಮ: ಮಂಜುನಾಥ ಭಂಡಾರಿ

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ...

Copying is disabled on Udupi Digital News.