Saturday, October 17, 2026

ಅಕ್ಷರ ಲೋಕದ ಚಿಂತಕ ಬರಗೂರು ರಾಮಚಂದ್ರಪ್ಪ ಮುಡಿಗೆ ಕಾರಂತ ಪ್ರಶಸ್ತಿಯ ಗರಿ

ಅ. 24ರಂದು ಕುಂದಾಪುರದಲ್ಲಿ ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ
ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ಕುಂದಾಪುರ: ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಡಾ. ಶಿವರಾಮ ಕಾರಂತರ ಬದುಕು, ಬರಹ ಹಾಗೂ ವೈಚಾರಿಕ ಚಿಂತನೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಅಕ್ಟೋಬರ್ 24ರಂದು ಕುಂದಾಪುರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ. ಶಿವರಾಮ್ ಕಾರಂತ್ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.

ಈ ಬಗ್ಗೆ ಶನಿವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಹಿರಿಯ ಸಾಹಿತಿ, ವಿದ್ವಾಂಸ ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ, ಕೆಎಎಸ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಎ. ಕಿರಣ್‌ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಐವರಿಗೆ ಕಾರಂತ ವಿಶೇಷ ಪುರಸ್ಕಾರ:
ಸಾಹಿತ್ಯ, ವೈದ್ಯಕೀಯ, ಸಮಾಜಸೇವೆ, ಪತ್ರಿಕೋದ್ಯಮ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಸಾಧಕರಿಗೆ ಇದೇ ಸಂದರ್ಭದಲ್ಲಿ ಕಾರಂತ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು. ಖ್ಯಾತ ಮನೋವೈದ್ಯ, ಲೇಖಕ ಹಾಗೂ ಸಾಮಾಜಿಕ ಹೋರಾಟಗಾರ ಡಾ. ಪಿ. ವಿಭಂಡಾರಿ, ಸಮಾಜಸೇವಕ ಗಣೇಶ್ ಕೊರಗ ಕುಂಭಾಶಿ, ನಿವೃತ್ತ ಪ್ರಾಧ್ಯಾಪಕಿ ಹಾಗೂ ಲೇಖಕಿ ಯು. ಮಹೇಶ್ವರಿ ಕಾಸರಗೋಡು, ಪತ್ರಕರ್ತ ಜಾನ್ ಡಿಸೋಜ ಕುಂದಾಪುರ ಮತ್ತು ಖ್ಯಾತ ರಂಗತಜ್ಞ ಡಾ. ಶ್ರೀಪಾದ್ ಭಟ್ ಅವರು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಚಿಂತಕಿ ರೇಖಾ ಬನ್ನಾಡಿ ಹಾಗೂ ಕಾರ್ಕಳದ ಕರಾವಳಿ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ ಅವರನ್ನೊಳಗೊಂಡ ಆಯ್ಕೆ ಸಮಿತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರು ಟ್ರಸ್ಟ್‌ನ ತ್ರೈಮಾಸಿಕ ಬುಲೆಟಿನ್ ಬಿಡುಗಡೆಗೊಳಿಸಲಿದ್ದಾರೆ. ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಕಾರಂತರ ಕಥನಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ:
ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಅಕ್ಟೋಬರ್ 24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕಾರಂತರ ಕಥನಗಳ ವರ್ತಮಾನದ ಮರುಓದು’ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಸಾಂಸ್ಕೃತಿಕ ಚಿಂತಕ ಹಾಗೂ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿರಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೇರಳದ ಕಾಸರಗೋಡಿನ ಕೇಂದ್ರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಚೇತನ್ ಮುಂಡಾಜೆ, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಹಾಗೂ ಲೇಖಕಿ ಡಾ. ರೇಖಾ ಬನ್ನಾಡಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಪ್ಪ ಎಸ್. ಬಂಡಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಡಾ. ಯಶುಕುಮಾರ್ ಡಿ., ಕೋಟೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸುಧಾಕರ್ ದೇವಾಡಿಗ, ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕಿ ಹಾಗೂ ಲೇಖಕಿ ಡಾ. ಪಾರ್ವತಿ ಜಿ. ಐತಾಳ್, ಪ್ರಾಂಶುಪಾಲೆ ಹಾಗೂ ಚಿಂತಕಿ ಡಾ. ನಿಕೇತನ, ರಂಗತಜ್ಞ ಡಾ. ಶ್ರೀಪಾದ್ ಭಟ್ ಮತ್ತು ಟ್ರಸ್ಟ್ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ. ಪ್ರಸಾದ್ ರಾವ್ ವಿಚಾರ ಸಂಕಿರಣದಲ್ಲಿ ಪ್ರತಿಕ್ರಿಯೆ ನೀಡಲಿದ್ದಾರೆ.

ಕಾರಂತರ ಕಥನಗಳ ನಾಟಕ ಪ್ರದರ್ಶನ:

ವಿಚಾರ ಸಂಕಿರಣದ ಬಳಿಕ ಸಂಜೆ 3 ಗಂಟೆಯಿಂದ ಕಾರ್ಕಳದ ಕರಾವಳಿ ರಂಗಾಯಣದ ರೆಪರ್ಟರಿ ತಂಡದಿಂದ ಕಾರಂತರ ಕಥನ ಆಧಾರಿತ ನಾಟಕ ಪ್ರದರ್ಶನಗೊಳ್ಳಲಿದೆ. ಬಿ.ಆರ್. ವೆಂಕಟರಮಣ ಐತಾಳ ಅವರು ನಾಟಕ ನಿರ್ದೇಶನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಕಾರಂತರ ಚಿಂತನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ:
ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾದ ಡಾ. ಶಿವರಾಮ ಕಾರಂತರು ತಮ್ಮ ಕೃತಿಗಳ ಮೂಲಕ ಶೋಷಣೆ, ಕಂದಾಚಾರ, ಅಸಮಾನತೆ ಮತ್ತು ದಬ್ಬಾಳಿಕೆಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದ್ದರು. ವೈಚಾರಿಕತೆ ಹಾಗೂ ವೈಜ್ಞಾನಿಕ ದೃಷ್ಟಿಕೋನ ಅವರ ಸಾಹಿತ್ಯದ ಪ್ರಮುಖ ಲಕ್ಷಣಗಳಾಗಿವೆ. ಕರಾವಳಿಯ ಬದುಕು, ಸಂಸ್ಕೃತಿ ಮತ್ತು ಸಾಮಾಜಿಕ ವಾಸ್ತವಗಳನ್ನು ಸಾಹಿತ್ಯದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ ಅವರು ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಸ್ಥಾನ ಪಡೆದಿದ್ದಾರೆ.

ಕಾರಂತರ ಬದುಕು ಮತ್ತು ಸಾಹಿತ್ಯದ ಕುರಿತು ಇಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ 2002ರಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ಸ್ಥಾಪಿಸಿತು. ಡಿಸೆಂಬರ್ 2024ರಲ್ಲಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರ ಅಧ್ಯಕ್ಷತೆಯಲ್ಲಿ ನೂತನ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಟ್ರಸ್ಟ್ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕಳೆದ ಒಂದೂವರೆ ವರ್ಷದಲ್ಲಿ 75ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿರುವ ಟ್ರಸ್ಟ್, ‘ಅರಿವಿನ ಬೆಳಕು’, ‘ಮಕ್ಕಳಿಗಾಗಿ ಕಾರಂತರು’, ತರಬೇತಿ ಶಿಬಿರಗಳು, ರಾಷ್ಟ್ರೀಯ ವಿಚಾರ ಸಂಕಿರಣಗಳು ಹಾಗೂ ರಂಗಪ್ರದರ್ಶನಗಳ ಮೂಲಕ ಕಾರಂತರ ಚಿಂತನೆಗಳನ್ನು ವ್ಯಾಪಕವಾಗಿ ಜನರಿಗೆ ತಲುಪಿಸಲು ಪ್ರಯತ್ನಿಸಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶದಿಂದ ಹಾವೇರಿ, ಕೊಪ್ಪಳ ಮತ್ತು ಬೆಂಗಳೂರಿನಲ್ಲಿ ಈಗಾಗಲೇ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ.

ಕಾರಂತರ ಸಾಹಿತ್ಯವನ್ನು ಸಮಕಾಲೀನ ದೃಷ್ಟಿಕೋನದಿಂದ ಮರುಪರಿಶೀಲಿಸುವುದು, ಹೊಸ ತಲೆಮಾರಿನಲ್ಲಿ ಓದುವ ಅಭಿರುಚಿ ಬೆಳೆಸುವುದು ಹಾಗೂ ಕನ್ನಡದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಈ ಕಾರ್ಯಕ್ರಮಗಳ ಪ್ರಮುಖ ಆಶಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಪೂರ್ಣಿಮಾ, ಡಾ. ಬಿ.ಬಿ ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಕೊತ್ತಾಡಿ ಉಮೇಶ್ ಶೆಟ್ಟಿ, ಸಮಿತಿ ಸದಸ್ಯರಾದ ಚೇತನ್ ಶೆಟ್ಟಿ, ಭಾರತಿ ಮರವಂತೆ ಉಪಸ್ಥಿತರಿದ್ದರು.

More like this
Related

ಕುಂದಾಪುರದಲ್ಲಿ ಹುಲಿವೇಷದ ಅಬ್ಬರ: ಅ.19ರಂದು ನೃತ್ಯ ಪ್ರದರ್ಶನ

ಪಾರಂಪರಿಕ ಕಲೆಯ ಉಳಿವಿಗೆ ಕಲಾಕ್ಷೇತ್ರದ ಹೆಜ್ಜೆಕುಂದಾಪುರ: ಕರಾವಳಿಯ ಸಾಂಪ್ರದಾಯಿಕ ಕಲೆಯಾದ ಹುಲಿವೇಷಕ್ಕೆ...

ದಸರಾ ವೇಳೆ ಬಲೂನ್ ಮಾರುತ್ತಿದ್ದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿಗೆ ಗಲ್ಲು ಶಿಕ್ಷೆ

ಮೈಸೂರು: ಕಳೆದ ವರ್ಷದ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಒಂಬತ್ತು ವರ್ಷದ...

MRPL ನಲ್ಲಿ ಸ್ಫೋಟ ಪ್ರಕರಣ: ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ಮೃತ್ಯು

ಸುರತ್ಕಲ್: ಇಲ್ಲಿನ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಸೆ.30ರಂದು...

ತೆರೆಯ ಮೇಲೆ ಮೋಡಿ ಮಾಡಿದ ಸೀಗೆಗುಡ್ಡ: ‘ಪ್ರೇಮದ ಊರಲಿ’ ಎಫೆಕ್ಟ್‌ನಿಂದ ಪ್ರವಾಸಿ ತಾಣಕ್ಕೆ ಹೊಸ ಕಳೆ!

ಹಾಸನ: ಹಚ್ಚ ಹಸಿರಿನ ಬೆಟ್ಟಗಳು, ಮಂಜು ಮುಸುಕಿದ ಪರಿಸರ, ತಂಪಾದ ಗಾಳಿ,...

Copying is disabled on Udupi Digital News.