ಅಭಿಮತ ಸಂಭ್ರಮ 2026 ಕಚೇರಿ ಉದ್ಘಾಟನೆ
ಯುಡಿ ನ್ಯೂಸ್ ಡಾಟ್ ಕಾಮ್
ಬ್ರಹ್ಮಾವರ: ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ ಹಾಗೂ ಅಸೂಯೆ ಬದಲಾಗಿ ಶಾಂತಿ, ನೆಮ್ಮದಿ ದೊರಕುವಂತಾಗಲೂ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಿಂತನೆಗಳ ಅಗತ್ಯ ಹೆಚ್ಚಾಗಿದೆ ಎಂದು ಹಿರಿಯ ಲೆಕ್ಕ ಪರಿಶೋಧಕ ಪದ್ಮನಾಭ ಕಾಂಚನ್ ಹೇಳಿದರು.
ಇಲ್ಲಿನ ಸ್ವರ್ಣ ನಗರದಲ್ಲಿ ಬುಧವಾರ ಜನಸೇವಾ ಟ್ರಸ್ಟ್ (ರಿ) ಮೂಡುಗಿಳಿಯಾರು ಹಾಗೂ ಟೀಮ್ ಅಭಿಮತ ಆಶ್ರಯದಲ್ಲಿ ಫೆ.14 ರಂದು ನಡೆಯಲಿರುವ ಅಭಿಮತ ಸಂಭ್ರಮದ ಕಚೇರಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಬ್ರಹ್ಮಾವರ ಇತಿಹಾಸದ ಪುಟಗಳಲ್ಲಿ ಶಾಶ್ವತ ಪಡಿಯಚ್ಚು ಮೂಡಿಸಿರುವ ಅಭಿಯತ ಸಂಭ್ರಮದ ಅಚ್ಚುಕಟ್ಟು ಇತರರಿಗೆ ಆದರ್ಶವಾಗಿದೆ. ಅಭಿಮತ ಕಾರ್ಯಕ್ರಮ ಯಾವಾಗ ಎನ್ನುವ ಕಾತರ ಈ ಭಾಗದ ಜನರಿಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರಪಟ ಬಿಡುಗಡೆ ಮಾಡಿ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ ಅವರು, ಸಮಾಜಮುಖಿ ಕಾರ್ಯಕ್ರಮಗಳನ್ನು ಹೇಗೆ ಮಾಡಬಹುದು ಎನ್ನುವುದಕ್ಕೆ ಟೀಮ್ ಅಭಿಮತ ತಂಡದ ಕಾರ್ಯಶೈಲಿಯೇ ಮಾದರಿ. ಸೈನ್ಯ ಬಲಿಷ್ಠವಾಗಿದ್ದರೆ ಸಾಲದು, ಸೈನ್ಯಾಧಿಕಾರಿಯೂ ಬಲಿಷ್ಠನಾಗಿರಬೇಕು ಎನ್ನುವುದಕ್ಕೆ ಟೀಂ ಅಭಿಮತದ ನೇತಾರ ವಸಂತ ಗಿಳಿಯಾರ್ ಅವರೆ ಒಳ್ಳೆಯ ಉದಾಹರಣೆ ಎಂದರು.
ನಿವೃತ್ತ ವಿಮಾ ಅಧಿಕಾರಿ ಅಚ್ಚುತ ಪೂಜಾರಿ, ಅಂತಾರಾಷ್ಟ್ರೀಯ ಕ್ರೀಡಾ ಪಟು ಜಿ.ವಿ ಅಶೋಕ್ ಇದ್ದರು.
ಹೆದ್ದಾರಿ ಮಠದ ಹೆಚ್.ಗುರುಮೂರ್ತಿ ಅಡಿಗರು, ಸಂಕ್ರಾಂತಿ ಪರ್ವ ಕಾಲದಲ್ಲಿ ಆರಂಭವಾಗುವ ಶುಭ ಕಾರ್ಯಗಳು ವೃದ್ದಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಸಂಕ್ರಮಣ ಕಾಲದಲ್ಲಿ ಅಭಿಮತದ ಕಚೇರಿ ಆರಂಭವಾಗುತ್ತಿರುವುದು ಸಂತೋಷ ತಂದಿದೆ ಎಂದರು.
ಮೂಡುಗಿಳಿಯಾರು ಜನಸೇವಾ ಟ್ರಸ್ಟ್ (ರಿ) ಅಧ್ಯಕ್ಷರಾದ ವಸಂತ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಾಂಸ್ಕೃತಿಕ ಚಿಂತಕ ಉದಯ್ ಕುಮಾರ್ ಶೆಟ್ಟಿ ಪಡುಕೆರೆ, ಸ್ವಾಗತ ಸಮಿತಿ ಅಧ್ಯಕ್ಷ ರಾಜೇಶ್ ಕೆ.ಸಿ, ಟೀಮ್ ಅಭಿಮತ ಸಂಚಾಲಕ ಪ್ರವೀಣ್ ಯಕ್ಷಿಮಠ, ರಾಘವೇಂದ್ರರಾಜ್ ಸಾಸ್ತಾನ, ಜಗದೀಶ್ ಆಚಾರ್, ಶರತ್ ಕುಮಾರ್ ಶೆಟ್ಟಿ ಕೊತ್ತಾಡಿ, ನಿಖಿಲ್ ನಾಯಕ್ ತೆಕ್ಕಟ್ಟೆ, ಸುದೇಶ್ ಶೆಟ್ಟಿ ಬ್ರಹ್ಮಾವರ, ಸಂತೋಷ್ ಶೆಟ್ಟಿ ವಡ್ಡರ್ಸೆ ಇದ್ದರು.




