ಉಡುಪಿ: ಉಡುಪಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕಡಿಯಾಳಿ ಕಾತ್ಯಾಯನಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಸಿದ್ಧಿ ವಿನಾಯಕ ದೇವರ 60ನೇ ವರ್ಷದ ವೈಭವದ ಭವ್ಯ ವಿಸರ್ಜನಾ ಮೆರವಣಿಗೆ ಸೆ.20ರಂದು (ಭಾನುವಾರ) ಸಂಜೆ 4 ಗಂಟೆಗೆ ನಡೆಯಲಿದೆ.
ಕಡಿಯಾಳಿಯಿಂದ ಆರಂಭವಾಗುವ ಮೆರವಣಿಗೆಯು ಸ್ತಬ್ಧಚಿತ್ರಗಳು ಹಾಗೂ ಮಂಗಳವಾದ್ಯಗಳೊಂದಿಗೆ ಉಡುಪಿಯ ಪ್ರಮುಖ ರಾಜಮಾರ್ಗಗಳಲ್ಲಿ ಸಂಚರಿಸಲಿದೆ. ಕಲ್ಸಂಕ, ರಥಬೀದಿ, ಬಡಗುಪೇಟೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಾಗಿದ ಬಳಿಕ ಶ್ರೀ ಸಿದ್ಧಿ ವಿನಾಯಕನನ್ನು ರಾತ್ರಿ ಸುಮಾರು 9.30ಕ್ಕೆ ಮಲ್ಪೆ ಸಮುದ್ರ ತೀರಕ್ಕೆ ಕೊಂಡೊಯ್ಯಲಾಗುವುದು.
ಮಲ್ಪೆ ಸಮುದ್ರ ತೀರದಲ್ಲಿ ಸಮುದ್ರ ರಾಜನಿಗೆ ವಿಶೇಷ ಆರತಿ ನೆರವೇರಿಸಿದ ಬಳಿಕ ಗಣಪತಿಗೆ ವಿಸರ್ಜನಾ ಆರತಿ ಹಾಗೂ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ಬಳಿಕ ಕಡಲ ತೀರದಲ್ಲಿ ಶ್ರೀ ಸಿದ್ಧಿ ವಿನಾಯಕನ ವಿಸರ್ಜನೆ ನಡೆಯಲಿದೆ. ಕಳೆದ ಆರು ವರ್ಷಗಳಿಂದ ಮಲ್ಪೆ ಸೀವಾಕ್ ನಲ್ಲಿ ಗಣೇಶನ ವಿಸರ್ಜನೆ ನಡೆಯುತ್ತಿತ್ತು. ಆದರೆ ಈ ಬಾರಿ ಮಲ್ಪೆ ಕಡಲ ತೀರದಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.
ವಿಸರ್ಜನಾ ಕಾರ್ಯಕ್ರಮದ ಅಂಗವಾಗಿ ವಿಶೇಷ ಸುಡುಮದ್ದು ಪ್ರದರ್ಶನವೂ ಆಯೋಜಿಸಲಾಗಿದೆ. ಮಲ್ಪೆಯ ಮೀನುಗಾರ ಸಮುದಾಯದ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನಡೆಸಲಾಗುವುದು ಎಂದು ಸಮಿತಿ ತಿಳಿಸಿದೆ.
ವಿಸರ್ಜನಾ ಮೆರವಣಿಗೆ ಹಾಗೂ ಸಮುದ್ರ ತೀರದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ನಾಗರಿಕರು, ಭಕ್ತಾದಿಗಳು ಹಾಗೂ ಗಣೇಶ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ವೈಭವವನ್ನು ಕಣ್ತುಂಬಿಕೊಳ್ಳುವಂತೆ ಸಮಿತಿ ಮನವಿ ಮಾಡಿದೆ.




