Monday, September 14, 2026

ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ತಿರುವು: ಯುಪಿಸಿಎಲ್ ಗುತ್ತಿಗೆ ಕೈತಪ್ಪಿದ್ದಕ್ಕೆ ಕಿಶೋರ್ ಪೂಜಾರಿಯಿಂದ ₹10 ಲಕ್ಷ ಸುಪಾರಿ

ಉಡುಪಿ: ಮದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಅದಾನಿ ಯುಪಿಸಿಎಲ್‌ನ ಕೋಟ್ಯಂತರ ರೂ. ಮೊತ್ತದ ಗುತ್ತಿಗೆ ಕೈತಪ್ಪಿದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಕಿಶೋರ್ ರಾಮ ಪೂಜಾರಿ, ತನ್ನ ಸಹೋದರ ಹಾಗೂ ಭೂಗತ ಪಾತಕಿ ಹೇಮಂತ್ ಪೂಜಾರಿ ಮೂಲಕ ಡೇವಿಡ್ ಡಿಸೋಜ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಹರಿರಾಮ್ ಶಂಕರ್, ಪ್ರಕರಣದ ತನಿಖೆಯ ವೇಳೆ ದೊರೆತ ಪ್ರಮುಖ ಮಾಹಿತಿಗಳನ್ನು ಬಹಿರಂಗಪಡಿಸಿದರು.

ಉಚ್ಚಿಲ ನಿವಾಸಿ ಕಿಶೋರ್ ರಾಮ ಪೂಜಾರಿ ಈ ಹಿಂದೆ ಯುಪಿಸಿಎಲ್‌ನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದನು. ಸುಮಾರು ಆರು ತಿಂಗಳ ಹಿಂದೆ ಎರ್ಮಾಳಿನಲ್ಲಿ ಯುಪಿಸಿಎಲ್ ಕೈಗೆತ್ತಿಕೊಂಡಿದ್ದ ಪೈಪ್‌ಲೈನ್ ಹಾಗೂ ಕಾಂಕ್ರಿಟ್ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ತನಗೆ ನೀಡುವಂತೆ ಕಿಶೋರ್ ಪೂಜಾರಿ ಮನವಿ ಮಾಡಿದ್ದನು.

ಆದರೆ, ಕಂಪೆನಿ ಗುತ್ತಿಗೆಯನ್ನು ಕಿಶೋರ್ ಪೂಜಾರಿಗೆ ನೀಡದೆ ಡೇವಿಡ್ ಡಿಸೋಜ ಅವರಿಗೆ ನೀಡಿತ್ತು. ಕೋಟ್ಯಂತರ ರೂ. ಮೊತ್ತದ ಈ ಯೋಜನೆ ಕೈತಪ್ಪಿದ್ದರಿಂದ ಅಸಮಾಧಾನಗೊಂಡ ಕಿಶೋರ್ ಪೂಜಾರಿ, ಡೇವಿಡ್ ಡಿಸೋಜ ಅವರನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.

ಆ.7ರಂದು ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ರಾಜು, ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ಶೇಖ್ ಅವರನ್ನು ಬಂಧಿಸಿದ್ದರು.

ಅನ್ಮೋಲ್ ಮತ್ತು ಜಿಯಾಹುಲ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರ ಹಾಗೂ ಅವರಿಗೆ ನೀಡಲಾಗಿದ್ದ ಡೀಲ್ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಂಧಿತರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ ಹಾಗೂ ಸದಾನಂದ ದೇವಾಡಿಗ ಅವರು ಹಣ ಜಮೆ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿರುವುದು ಹಾಗೂ ಕೃತ್ಯಕ್ಕೆ ಸುಪಾರಿ ನೀಡಿರುವುದು ಎರ್ಮಾಳಿನ ಗುತ್ತಿಗೆದಾರ ಕಿಶೋರ್ ಪೂಜಾರಿ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಆರೋಪಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿದ್ದ ಬಿಹಾರ ಮೂಲದ ಸೂರಜ್ ಕುಮಾರ್ ಎಂಬಾತನನ್ನು ಪೊಲೀಸರು ಉತ್ತರಾಖಂಡದಲ್ಲಿ ಬಂಧಿಸಿ ವಿಚಾರಣೆ ನಡೆಸಿದರು.

ಆತನ ವಿಚಾರಣೆಯಿಂದ ಡೇವಿಡ್ ಡಿಸೋಜ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಬೇಕಿದ್ದ ಮೂವರು ಶೂಟರ್‌ಗಳನ್ನು ವ್ಯವಸ್ಥೆ ಮಾಡಿದ್ದ ಅನೂಜ್ ಎಂಬಾತನ ಬಗ್ಗೆ ಮಾಹಿತಿ ದೊರೆತಿದೆ.

ಅನೂಜ್ ದೇಶದ ವಿವಿಧೆಡೆ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಆತನ ಪತ್ತೆ ಪೊಲೀಸರಿಗೆ ಸವಾಲಾಗಿತ್ತು. ಸೂರಜ್ ಕುಮಾರ್ ನೀಡಿದ ಮಾಹಿತಿಯ ಆಧಾರದ ಮೇಲೆ ತನಿಖೆ ಮುಂದುವರಿಸಿದ ಪೊಲೀಸರು, ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಅನೂಜ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡೇವಿಡ್ ಡಿಸೋಜ ಹತ್ಯೆಗಾಗಿ ಕಿಶೋರ್ ಪೂಜಾರಿ ₹10 ಲಕ್ಷ ಮೊತ್ತದ ಸುಪಾರಿ ನೀಡಿದ್ದನು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಶೂಟರ್‌ಗಳ ಖಾತೆಗಳಿಗೂ ಹಣ ಪಾವತಿಯಾಗಿರುವುದು ಪತ್ತೆಯಾಗಿದೆ.

ಈ ಕೃತ್ಯಕ್ಕಾಗಿ ಅನೂಜ್‌ನನ್ನು ಸಂಪರ್ಕಿಸಲಾಗಿತ್ತು. ಆತ ಆರಂಭದಲ್ಲಿ ಇಬ್ಬರು ಶೂಟರ್‌ಗಳೊಂದಿಗೆ ಮಾತುಕತೆ ನಡೆಸಿದ್ದನು. ಆದರೆ ಹಣದ ವಿಚಾರದಲ್ಲಿ ಒಪ್ಪಂದವಾಗದ ಹಿನ್ನೆಲೆಯಲ್ಲಿ ಆ ಇಬ್ಬರು ಶೂಟರ್‌ಗಳು ಹಿಂದೆ ಸರಿದಿದ್ದರು.

ಆ ಇಬ್ಬರು ಶೂಟರ್‌ಗಳು ಮತ್ತೊಂದು ಪ್ರಕರಣದಲ್ಲಿ ಗುಜರಾತ್ ಪೊಲೀಸರಿಂದ ಬಂಧಿತರಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಇದನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಾಗಿದೆ. ಅವರು ನೇರವಾಗಿ ಕೃತ್ಯದಲ್ಲಿ ಭಾಗಿಯಾಗದಿದ್ದರೂ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಪ್ರಕರಣದ ಆರಂಭಿಕ ತನಿಖೆ ವೇಳೆ ಪಂಜಾಬ್ ಮೂಲದ ಗುತ್ತಿಗೆ ಕಂಪೆನಿಯೊಂದು ಕೃತ್ಯದ ಹಿಂದೆ ಇರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತ್ತು. ಅದೇ ರೀತಿ ಕೇರಳ ಮೂಲದ ಕಂಪೆನಿಯ ಬಗ್ಗೆಯೂ ಶಂಕೆ ವ್ಯಕ್ತವಾಗಿತ್ತು.

ಆದರೆ ತನಿಖೆ ನಡೆಸಿದಾಗ ಈ ಎರಡೂ ಕಂಪೆನಿಗಳು ಕೃತ್ಯಕ್ಕೆ ಯಾವುದೇ ಹಣಕಾಸಿನ ನೆರವು ನೀಡಿರುವುದು ಕಂಡುಬಂದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.

ಎರ್ಮಾಳಿನ ಪ್ರಾಜೆಕ್ಟ್‌ನ್ನು ಕಿಶೋರ್ ಪೂಜಾರಿಗೆ ನೀಡುವಂತೆ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಇಂಟರ್‌ನೆಟ್ ಮೂಲಕ ಯುಪಿಸಿಎಲ್ ಅಧಿಕಾರಿಗಳು ಹಾಗೂ ಡೇವಿಡ್ ಡಿಸೋಜ ಅವರಿಗೆ ಕರೆಗಳು ಬಂದಿದ್ದವು. ಆದರೆ ಈ ಬೇಡಿಕೆಗೆ ಅವರು ಒಪ್ಪಿರಲಿಲ್ಲ.

ಬಳಿಕ ಇದೇ ವ್ಯಕ್ತಿ ಇರ್ಷಾದ್, ಚಿರಾಗ್ ಹಾಗೂ ಸದಾನಂದ ಅವರಿಗೂ ಕರೆ ಮಾಡಿ ಮಾತುಕತೆ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಶೂಟರ್‌ಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದ ಅನೂಜ್ ಜೊತೆಯೂ ಹೇಮಂತ್ ಪೂಜಾರಿ ಸಂಪರ್ಕದಲ್ಲಿದ್ದನು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಡೇವಿಡ್ ಡಿಸೋಜ ಹತ್ಯೆಗೆ ಸುಮಾರು ಆರು ತಿಂಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

‘ಈ ಪ್ರಕರಣದಲ್ಲಿ ನನ್ನ ಅಣ್ಣ ಹೇಮಂತ್ ಪೂಜಾರಿ ಭಾಗಿಯಾಗಿದ್ದಾನೆ’ ಎಂದು ಕಿಶೋರ್ ಪೂಜಾರಿ ಹೇಳಿದ್ದಾನೆ. ಆದರೆ ಅದೇ ರಾತ್ರಿ, ‘ನಾವಿಬ್ಬರು ಹಲವು ವರ್ಷಗಳಿಂದ ಮಾತನಾಡುತ್ತಿಲ್ಲ’ ಎಂದು ಆತ ತಿಳಿಸಿದ್ದಾನೆ. ಹೀಗಾಗಿ ಪ್ರಕರಣದಲ್ಲಿ ಹೇಮಂತ್ ಪೂಜಾರಿ ನಿಜವಾಗಿಯೂ ಭಾಗಿಯಾಗಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಹೇಮಂತ್ ಪೂಜಾರಿ ಕಳೆದ 10 ವರ್ಷಗಳಿಂದ ಯಾವುದೇ ಬೆದರಿಕೆ ಕರೆ ಮಾಡಿರುವುದು ವರದಿಯಾಗಿಲ್ಲ. ಈವರೆಗೆ ಯಾವುದೇ ಪ್ರಕರಣದಲ್ಲಿ ಆತ ಬಂಧಿತನಾಗಿಲ್ಲ. ಕಳೆದ ಸುಮಾರು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ.

ಇನ್ನು ಕಿಶೋರ್ ಪೂಜಾರಿ ವಿರುದ್ಧ ಎರಡು ಕೊಲೆ ಪ್ರಕರಣಗಳಿದ್ದು, ಹೇಮಂತ್ ಪೂಜಾರಿ ಜೊತೆ ಸೇರಿ ಕೆಲವು ಅಪರಾಧಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.