ಉಡುಪಿ: ಧಾರ್ಮಿಕ ಚಟುವಟಿಕೆಗಳ ಕೇಂದ್ರ ಹಾಗೂ ಪೊಡವಿಗೊಡೆಯನ ಬೀಡು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವದ ಸಂಭ್ರಮ ಮನೆಮಾಡಿದೆ . ಸೆ. 4 ಮತ್ತು 5ರಂದು ನಡೆಯಲಿರುವ ಈ ಉತ್ಸವಕ್ಕಾಗಿ ಕೃಷ್ಣಮಠ ಹಾಗೂ ರಥಬೀದಿಯಲ್ಲಿ ಪೂರ್ವತಯಾರಿಗಳು ಭರದಿಂದ ನಡೆದಿವೆ
ದೇವರ ದರ್ಶನಕ್ಕೆ ದೇಶ-ವಿದೇಶಗಳಿಂದ ಆಗಮಿಸುವ ಸಾವಿರಾರು ಭಕ್ತರನ್ನು ಸ್ವಾಗತಿಸಲು ಇಡೀ ರಥಬೀದಿ ಬೀದಿಯೇ ಸಿಂಗಾರಗೊಂಡಿದೆ. ವಿಟ್ಲಪಿಂಡಿ ಸಂಭ್ರಮದ ಮುಖ್ಯ ಆಕರ್ಷಣೆಯಾದ “ಮೊಸರು ಕುಡಿಕೆ ಉತ್ಸವ’ಕ್ಕಾಗಿ ಬೃಹತ್ ಕಂಬಗಳನ್ನು ನೆಡಲಾಗಿದೆ. ಭಕ್ತರಿಗೆ ಪ್ರಸಾದ ವಿತರಣೆಗೆ ಎರಡು ಮಂಟಪ ಸಿದ್ದಗೊಂಡಿದ್ದು, ಮಲ್ಲಯುದ್ಧ ಪ್ರದರ್ಶನಕ್ಕಾಗಿ ಶೀರೂರು ಮಠದ ಆವರಣದಲ್ಲಿ ವೇದಿಕೆ ಸಿದ್ದಗೊಂಡಿದೆ ಶ್ರೀಕೃಷ್ಣ ಮಠದ ಎದುರಿನ ಪ್ರವೇಶ ದ್ವಾರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಸೆ.4ರ ತಡರಾತ್ರಿ 12.12ಕ್ಕೆ ಅರ್ಥ್ಯ ಪ್ರದಾನ ನಡೆಯ ಲಿದೆ. ಸೆ. 5ರ ಬೆಳಗ್ಗೆ ಮಹಾಪೂಜೆ, ಅನ್ನಸಂತರ್ಪಣೆ, ರಾಜಾಂಗಣದಲ್ಲಿ ಹುಲಿವೇಷ ಕುಣಿತ, ವಿವಿಧ ಸ್ಪರ್ಧೆ ಗಳು, ರಥಬೀದಿಯಲ್ಲಿ ವಿಟ್ಲಪಿಂಡಿ ಶ್ರೀಕೃಷ್ಣ ಲೀಲೋತ್ಸವ ಜರಗಲಿದೆ. ಅಪರಾಹ್ನ 3.30ಕ್ಕೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ ಜರಗಲಿದೆ.. ವಿಟ್ಲಪಿಂಡಿ-ಶ್ರೀಕೃಷ್ಣ ಲೀಲೋತ್ಸವದ ಪ್ರಯುಕ್ತ ರಥಬೀದಿಯ ವಿಶೇಷ ವೇದಿಕೆಯಲ್ಲಿ ಆಹ್ವಾನಿತ ಮಲ್ಲಯುದ್ಧ ಪ್ರವೀಣರಿಂದ ಮಲ್ಲಯುದ್ಧ ಪ್ರದರ್ಶನ ನಡೆಯಲಿದೆ. ಸೆ. 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ, ಬಹುಮಾನ ವಿತರಣೆ ನಡೆಯಲಿದೆ.

ಭಕ್ತರಿಗೆ ವಿತರಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಉಂಡೆ, ಚಕ್ಕುಲಿಗಳು ಈಗಾಗಲೇ ಸಿದ್ದಗೊಳ್ಳುತ್ತಿದ್ದು, ಹಲವಾರು ಮಂದಿ ಪಾಕತಜ್ಞರು ಇದರ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಸುಮಾರು 1.50 ಲಕ್ಷ ಉಂಡೆ, ಚಕ್ಕುಲಿ ತಯಾರಿಸಲಾಗಿದೆ. ಸಮಾನ ಭೋಜನ ಪರಿಕಲ್ಪನೆ ಯಡಿ ರಾಜಾಂಗಣದಲ್ಲಿ ಬಫೆ, ಊಟದ ಚೌಕಿಯಲ್ಲಿ ಕೂತು ಊಟ ಮಾಡುವುದು, ಅಗತ್ಯವಿದ್ದವರಿಗೆ ಟೇಬಲ್ ವ್ಯವಸ್ಥೆಯಲ್ಲಿ ಊಟ ಬಡಿಸುವುದು ನಡೆಯಲಿದೆ.

ಶ್ರೀ ಕೃಷ್ಣ ಹಾಗೂ ಮಕ್ಕಳು ಇಷ್ಟಪಡುವ ಪ್ರಸಾದ ಇದಾಗಿದ್ದು, ಅಷ್ಟಮಿಯ ಮರುದಿನ ನಡೆಯುವ ಅನ್ನಸಂತರ್ಪಣೆ ಸಂದರ್ಭದಲ್ಲಿ ಪ್ರಸಾದದ ರೂಪದಲ್ಲಿ ಇವುಗಳನ್ನು ವಿತರಿಸಲಾಗುತ್ತದೆ.
ಸೆ.4ರಂದು ಬೆಳಗ್ಗೆ 4 ರಾಜಾಂಗಣ, ಮಧ್ವಮಂಟಪ, ಅನ್ನಬ್ರಹ್ಮ ಮೊದಲಾದ ಕಡೆಗಳಲ್ಲಿ ವಿವಿಧ ವಯೋಮಿತಿಯ ಮಕ್ಕಳ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿದೆ.

ಅಷ್ಟಮಿ ಉತ್ಸವಕ್ಕೆ ಮೆರುಗು ನೀಡಲಿರುವುದು ಕರಾವಳಿಯ ಸಾಂಪ್ರದಾಯಿಕ ಹುಲಿವೇಷ ಮತ್ತು ವಿವಿಧ ವೇಷಭೂಷಣಗಳು. ನೂರಾರು ಹುಲಿವೇಷ ತಂಡಗಳು ಈಗಾಗಲೇ ತಾಲೀಮು ಆರಂಭಿಸಿದ್ದು, ರಥಬೀದಿಯಲ್ಲಿ ಹೆಜ್ಜೆ ಹಾಕಲು ಕಾಯುತ್ತಿವೆ.
ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸವದ ಸಂದರ್ಭ ಮೊಸರು ಕುಡಿಕೆ ಒಡೆಯಲು ಒಟ್ಟು 13 ಜತೆ ಗುರ್ಜಿ (ಕಂಬ)ಗಳನ್ನು ಸ್ಥಾಪಿಸಲಾಗಿದೆ. ಕೃಷ್ಣ ಮಠ, ಪರ್ಯಾಯ ಶೀರೂರು ಮಠ ವತಿಯಿಂದ 7 ಜತೆ ಗುರ್ಜಿಗಳನ್ನು, ಭಕ್ತರಿಗೆ ಉಂಡೆ, ಚಕ್ಕುಲಿ, ಬಾಳೆಹಣ್ಣು ಬೀರಲು ಮರದಿಂದ 2 ಮಂಟಪಗಳನ್ನು ನಿರ್ಮಿಸಲಾಗಿದೆ. ಒಂದು ಕನಕ ಗೋಪುರ ಎದುರು, ಇನ್ನೊಂದು ರಥೋತ್ಸವದ ಸಂದರ್ಭ ರಥ ನಿಲ್ಲುವ ಪ್ರದೇಶದಲ್ಲಿವೆ. ಉಳಿದ 6 ಜತೆ ಗುರ್ಜಿಗಳನ್ನು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ್ದು, ಅವುಗಳ ಅಳವಡಿಕೆ ಶ್ರೀ ಕೃಷ್ಣ ಮಠದ ವತಿಯಿಂದಲೇ ನಡೆಯುತ್ತದೆ.

ವಿಟ್ಲಪಿಂಡಿ ಉತ್ಸವದಲ್ಲಿ ಒಟ್ಟು ಎರಡು ರಥೋತ್ಸವ ನಡೆಯಲಿದೆ. ಒಂದು ಚಿನ್ನದ ರಥದಲ್ಲಿ ಅಷ್ಟಮಿ ಅಂಗವಾಗಿ ಸ್ಥಾಪಿಸಿದ ಶ್ರೀಕೃಷ್ಣದ ಮೃಣ್ಮಯ ಮೂರ್ತಿಯನ್ನು ಹಾಗೂ ಇನ್ನೊಂದು ಚಂದ್ರಮಂಡಲ, ರಥದಲ್ಲಿ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವರ ವಿಗ್ರಹ ಇರಿಸಿ ಉತ್ಸವ ನಡೆಯಲಿದೆ.

ಒಂದು ಗುರ್ಜಿಯಲ್ಲಿ 3 ಮಡಕೆಯಂತೆ ಒಟ್ಟು 45 ಮಡಕೆಗಳನ್ನು ಬಳಸಲಾಗುತ್ತಿದೆ. ಮಡಕೆಯಲ್ಲಿ ಮೊಸರು, ಅರಳು, ಅರಶಿನ ಇತ್ಯಾದಿಗಳನ್ನು ಹಾಕಲಾಗುತ್ತದೆ. ಮಠದ ಮೇಸ್ತ್ರಿ ಅವರು ರಾಟೆಯ ಮೂಲಕ ಮಡಕೆಯನ್ನು ಇಳಿಸುತ್ತಾರೆ. ಗೊಲ್ಲರು ಅದನ್ನು ಬಿದಿರ ಕೋಲಿನಿಂದ ಒಡೆಯುತ್ತಾರೆ. ಗೊಲ್ಲರಿಗೆ ಮುಖವರ್ಣಿಕೆ ಮಾಡಿ, ಮುಂಡಾಸು, ಹಳದಿ ಪಂಚೆ, ನೀಲಿ ಬನಿಯನ್, ಹಳದಿ ರಿಬ್ಬನ್ ತಲೆಗೆ ಕಟ್ಟಿ, ಬೈಹುಲ್ಲಿನಿಂದ ಮಾಡಿದ ಪೇಟ, ಡೋಲು ಇತ್ಯಾದಿಗಳೊಂದಿಗೆ ಸಾಂಪ್ರದಾಯಿಕ ಕುಣಿತದೊಂದಿಗೆ ಮಡಕೆಗೆ ಸುತ್ತ ಬಂದು ಮಡಕೆ ಒಡೆಯುತ್ತಾರೆ ಎಂದು ಪರ್ಯಾಯ ಮಠ ಶೀರೂರು ಮಠದ ದಿವಾನರಾದ ಡಾ| ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.




