ಉಡುಪಿ: ಸಾರ್ವಜನಿಕರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ಮನೆಯನ್ನು ಲಾಕ್ ಮಾಡಿ ಹೊರಗಡೆ ತೆರಳುವ ಸಂದರ್ಭಗಳಲ್ಲಿ ಮನೆಗಳ ಭದ್ರತೆ ಕಾಪಾಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (LHBS) ಎಂಬ ವಿನೂತನ ಯೋಜನೆಯನ್ನು ಆರಂಭಿಸಿದೆ.
ಈ ಯೋಜನೆಯಡಿ ಲಾಕ್ ಮಾಡಿರುವ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ಇಡಲಿದ್ದು, ಸಂಬಂಧಿತ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಹಗಲು ಹಾಗೂ ರಾತ್ರಿ ವೇಳೆ ಮನೆಗಳಿಗೆ ಭೇಟಿ ನೀಡಿ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಲಿದ್ದಾರೆ.
ಜಿಲ್ಲೆಯ ಸಾರ್ವಜನಿಕರು ಮನೆಯನ್ನು ಲಾಕ್ ಮಾಡಿ ಪ್ರವಾಸ ಅಥವಾ ಇತರ ಕಾರ್ಯಕ್ರಮಗಳಿಗೆ ತೆರಳುವಾಗ ಉಡುಪಿ ಜಿಲ್ಲಾ ನಿಯಂತ್ರಣ ಕೊಠಡಿಯ ವಿಶೇಷ ದೂರವಾಣಿ ಸಂಖ್ಯೆ 0820-2526709 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಅಲ್ಲದೆ, ನಿಯಂತ್ರಣ ಕೊಠಡಿಯಿಂದ ನೀಡಲಾಗುವ ವಾಟ್ಸಾಪ್ ಸಂಖ್ಯೆಗೆ ಮನೆಯಿಂದ ತೆರಳುವ ಹಾಗೂ ಮರಳಿ ಬರುವ ದಿನಾಂಕ ಮತ್ತು ಸಮಯ, ಮನೆಯ ಪೂರ್ಣ ವಿಳಾಸ ಹಾಗೂ ಮನೆಯ ಮುಂಭಾಗದಲ್ಲಿ ತೆಗೆದ ಸೆಲ್ಫಿ ಫೋಟೋವನ್ನು ಕಳುಹಿಸಬೇಕಾಗಿದೆ.
ಈ ಮಾಹಿತಿ ಸಂಬಂಧಿತ ಪೊಲೀಸ್ ಠಾಣೆಗೆ ರವಾನೆಯಾಗಿದ್ದು, ಬೀಟ್ ಸಿಬ್ಬಂದಿ ನಿಗದಿತ ಅವಧಿಯವರೆಗೆ ಆ ಮನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಈ ಸೌಲಭ್ಯವು ಕೇವಲ ಸ್ವಂತ ಅಥವಾ ವೈಯಕ್ತಿಕ ಮನೆಗಳಿಗೆ ಮಾತ್ರ ಅನ್ವಯವಾಗಿದ್ದು, ಅಪಾರ್ಟ್‌ಮೆಂಟ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸಾರ್ವಜನಿಕರು ತಮ್ಮ ಮನೆಯ ಮಾಹಿತಿಯನ್ನು ಯಾವುದೇ ಅಪರಿಚಿತ ಅಥವಾ ಅನಧಿಕೃತ ಸಂಖ್ಯೆಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.




