Tuesday, September 15, 2026

ಉಪ್ಪಿನಂಗಡಿ | ಖೋಟಾ ನೋಟು ಮುದ್ರಣ ಜಾಲ ಭೇದಿಸಿದ ಪೊಲೀಸರು: ಏಳು ಆರೋಪಿಗಳ ಬಂಧನ

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖೋಟಾ ನೋಟು ಮುದ್ರಣ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ದಾಳಿ ವೇಳೆ ಏಳು ಆರೋಪಿಗಳನ್ನು ಬಂಧಿಸಿ, ನಕಲಿ ಕರೆನ್ಸಿ ಮುದ್ರಣಕ್ಕೆ ಬಳಸುತ್ತಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಅಡೆಂಜದಲ್ಲಿರುವ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರಿಗೆ ಲಭಿಸಿತ್ತು. ಈ ಮಾಹಿತಿ ಮೇರೆಗೆ ಜುಲೈ 16ರಂದು ಬೆಳಿಗ್ಗೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ ಪೊಲೀಸರು ಸ್ಥಳದಲ್ಲಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಇಬ್ರಾಹಿಂ, ಶರೀಪ್, ಸಂದೀಪ್ ಪುಂಡಲಿಕ ಶೋಳಂಬಿ, ಮಹಮ್ಮದ್ ನಬಾಸ್, ಸಲ್ಮಾನ್ ಫಾರೀಸ್, ಸಿರಾಜುದ್ದೀನ್ ಹಾಗೂ ಇರ್ಷಾದ್ ಎಂದು ಗುರುತಿಸಲಾಗಿದೆ.

ದಾಳಿ ವೇಳೆ ₹500 ಮುಖಬೆಲೆಯ ಒಂದು ನಕಲಿ ನೋಟು, ₹500 ಮುಖಬೆಲೆಯ ನೋಟುಗಳ ಮಾದರಿಯಲ್ಲಿರುವ 21 ಎ-4 ಗಾತ್ರದ ಮುದ್ರಿತ ಹಾಳೆಗಳು, ಕಂಪ್ಯೂಟರ್, ಜೆರಾಕ್ಸ್ ಯಂತ್ರ, ವಿವಿಧ ಸೀಲುಗಳು ಸೇರಿದಂತೆ ನಕಲಿ ಕರೆನ್ಸಿ ತಯಾರಿಕೆಗೆ ಬಳಸುತ್ತಿದ್ದ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2026ರಡಿ ಬಿಎನ್‌ಎಸ್-2023ರ ಕಲಂ 178ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಪ್ರಕರಣದ ತನಿಖೆ ಹಾಗೂ ಖೋಟಾ ನೋಟು ಜಾಲದ ಪತ್ತೆ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದು ಮಣಿ ಆರ್.ಎನ್., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿ, ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ನಂದಕುಮಾರ್ ಹಾಗೂ ಅವರ ತಂಡ ಉಪ್ಪಿನಂಗಡಿ ಪೊಲೀಸರೊಂದಿಗೆ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.

More like this
Related

ದ್ವಿಚಕ್ರ ವಾಹನಕ್ಕೆ ಹಾಲು ಸಾಗಾಟದ ಟ್ಯಾಂಕರ್ ಢಿಕ್ಕಿ: ಒಂದೇ ಕುಟುಂಬದ ಮೂವರು ಮೃತ್ಯು

ಸ್ವಗ್ರಾಮದಲ್ಲಿ ಚೌತಿ ಹಬ್ಬ ಮುಗಿಸಿ ಊರಿಗೆ ಮರಳುತ್ತಿದ್ದ ವೇಳೆ ದುರ್ಘಟನೆ ಮಂಡ್ಯ: ದ್ವಿಚಕ್ರ...

ರೈತರನ್ನು ನಿರ್ಲಕ್ಷ ಮಾಡುತ್ತಿರುವ ಮೆಸ್ಕಾಂ: ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಕೃಷಿ ಪಂಪುಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸುತ್ತಿರುವ...

ಕಸ್ತೂರಿ ರಂಗನ್ ವರದಿ ಜಾರಿ: ಪಶ್ಚಿಮಘಟ್ಟ ತಪ್ಪಲು ಪ್ರದೇಶದ ಜನರಲ್ಲಿ ಆತಂಕ : ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಸೆ.18ರಂದು ಸಾರ್ವಜನಿಕರ ಅಹವಾಲು ಆಲಿಸಲು ಹೆಬ್ರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ಬಾಧಿತ...

ಕಂಡ್ಲೂರು ಹಳೆ ಸೇತುವೆ ನೆಲಸಮದ ಹುನ್ನಾರದ ಹಿಂದೆ ಭ್ರಷ್ಟಾಚಾರದ ಅನುಮಾನ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ ತೀರ್ಥಹಳ್ಳಿ ಸಂಪರ್ಕ ಮಾಡುವ ರಾಜ್ಯ ಹೆದ್ದಾರಿ ಹಾದು ಹೋಗುವ ವರಾಹಿ...

Copying is disabled on Udupi Digital News.