ಉಡುಪಿ: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಸುಮಾರು ₹23.56 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ, ವಿದೇಶಿ ಕರೆನ್ಸಿ ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಅರುಣ್ ಎಸ್.ವಿ. (43) ಹಾಗೂ ಕೌಶಿಕ್ (19) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪೆರಂಪಳ್ಳಿ ಸಂತೋಷನಗರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತುಗಳ ವಿವರ:
ಸುಮಾರು ₹2 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ನೋಟುಗಳು
1 ಕೆಜಿ 360 ಗ್ರಾಂ ಬೆಳ್ಳಿ ಆಭರಣಗಳು – ₹2,86,730
1.45 ಗ್ರಾಂ ಚಿನ್ನದ ನಾಣ್ಯಗಳು – ₹22,500
88.400 ಗ್ರಾಂ ಚಿನ್ನ – ₹13,26,000
ನಗದು ₹33,000
ಆಟೋರಿಕ್ಷಾ – ₹4 ಲಕ್ಷ
ಎರಡು ಮೊಬೈಲ್ ಫೋನ್‌ಗಳು – ₹13,000
ಕೃತ್ಯಕ್ಕೆ ಬಳಸಿದ ಕಳ್ಳತನದ ಪಲ್ಸರ್ ಬೈಕ್ – ₹45,000
ವಿದೇಶಿ ಕೈಗಡಿಯಾರ – ₹30,000
ಒಟ್ಟು ಸುಮಾರು ₹23,56,230 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು, ಕಳ್ಳತನ ಮಾಡಿದ್ದ ಪಲ್ಸರ್ ಬೈಕ್‌ನಲ್ಲಿ ತೆರಳಿ ಮನೆಗಳ ಬಾಗಿಲುಗಳನ್ನು ಮುರಿದು ಕಳವು ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಇಬ್ಬರು ಆರೋಪಿಗಳು ಉಡುಪಿ ಮತ್ತು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಐದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಉಡುಪಿ ನಗರ ಠಾಣಾ ಪ್ರಕರಣ ಸಂಖ್ಯೆ 107/2026 – ಕೊಡಂಕೂರು ಗ್ರಾಮದ ಶಶಿರೇಖಾ ಅವರ ಮನೆಯಲ್ಲಿ ಕಳ್ಳತನ.
ಉಡುಪಿ ನಗರ ಠಾಣಾ ಪ್ರಕರಣ ಸಂಖ್ಯೆ 108/2026 – ಪುತ್ತೂರು ಗ್ರಾಮದ ಭಗವತಿ ಲೇಔಟ್‌ನ ಸನಂ ಅವರ ಮನೆಯಲ್ಲಿ ಕಳ್ಳತನ.
ಮಲ್ಪೆ ಠಾಣಾ ಪ್ರಕರಣ ಸಂಖ್ಯೆ 82/2026 – ನೇಜಾರು ಮಸೀದಿ ಬಳಿಯ ಗ್ಯಾರೇಜ್‌ನಿಂದ ಸಂದೇಶ್ ಅವರ ಪಲ್ಸರ್ ಬೈಕ್ ಕಳ್ಳತನ.
ಮಲ್ಪೆ ಠಾಣಾ ಪ್ರಕರಣ ಸಂಖ್ಯೆ 85/2026 – ಕೆಳಾರ್ಕಳಬೆಟ್ಟು ನಿವಾಸಿ ತೃಪ್ತಿ ಅವಿನಾಶ್ ಅವರ ಮನೆಯಲ್ಲಿ ಕಳ್ಳತನ.
ಮಲ್ಪೆ ಠಾಣಾ ಪ್ರಕರಣ ಸಂಖ್ಯೆ 93/2026 – ಕೆಳಾರ್ಕಳಬೆಟ್ಟು ನಿವಾಸಿ ರವಿ ಉಪಾಧ್ಯ ಅವರ ಮನೆಯಲ್ಲಿ ಕಳ್ಳತನ.
ದುಬೈನಿಂದ ಬಂದಿದ್ದ ಮಹಿಳೆಯ ಮನೆಯಲ್ಲಿ ಕಳ್ಳತನ
ಆರೋಪಿಗಳ ಬಂಧನಕ್ಕೆ ಕಾರಣವಾದ ಪ್ರಕರಣದಲ್ಲಿ, ದುಬೈಯಿಂದ ಊರಿಗೆ ಬಂದಿದ್ದ ಸನಂ (39) ಅವರು ಆಗಸ್ಟ್ 8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆಗಸ್ಟ್ 11ರಂದು ಬೆಳಗ್ಗೆ 11.30ರ ಸುಮಾರಿಗೆ ಮನೆಗೆ ವಾಪಸಾದಾಗ, ಮನೆಯ ಟೆರೇಸ್ ಬಾಗಿಲನ್ನು ಕಳ್ಳರು ಆಯುಧದಿಂದ ಬಲವಂತವಾಗಿ ತೆರೆದಿರುವುದು ಕಂಡುಬಂದಿತ್ತು.
ಮನೆಯ ಕೋಣೆಯಲ್ಲಿದ್ದ ಕಪಾಟಿನ ಡ್ರಾವರ್‌ನಲ್ಲಿದ್ದ 10,000 AED ದಿರ್ಹಾಮ್ ಹಾಗೂ ₹14,000 ನಗದು, ಒಟ್ಟು ಸುಮಾರು ₹2.14 ಲಕ್ಷ ಮೌಲ್ಯದ ಹಣ ಕಳವಾಗಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಕ್ರ 108/2026, ಬಿಎನ್‌ಎಸ್‌ನ ಕಲಂ 331(3), 331(4), 305 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಜೈಲು ಶಿಕ್ಷೆ ಅನುಭವಿಸಿದ್ದ ಆರೋಪಿ
ಪ್ರಮುಖ ಆರೋಪಿ ಅರುಣ್ ಆಚಾರಿ ಈ ಹಿಂದೆ ಮಣಿಪಾಲ ಪೊಲೀಸ್ ಠಾಣಾ ಅಕ್ರ 176/2016ರ ಪೋಕ್ಸೋ ಪ್ರಕರಣದಲ್ಲಿ 9 ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿದ್ದು, 2025ರ ಜುಲೈನಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಐಪಿಎಸ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಪಿಎಸ್‌ಐ ಪ್ರಕಾಶ್ ಹಾಗೂ ಸಿಬ್ಬಂದಿಗಳಾದ ಪ್ರಸನ್ನ ಸಿ., ಜೀವನ್ ಕುಮಾರ್, ಕೃಷ್ಣ ದೇವಾಡಿಗ, ಆನಂದ ಗಾಣಿಗ, ಆನಂದ ಎಸ್., ಓಬಳೇಶ್, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ್, ಹೇಮಂತ್ ಕುಮಾರ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಲಾಗಿದೆ.




