ಭುವನೇಶ್ವರ: ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟದ ವಿವಿಧ ಪ್ರತಿಪಕ್ಷಗಳು ಕರೆ ನೀಡಿದ್ದ 12 ಗಂಟೆಗಳ ಒಡಿಶಾ ಬಂದ್‌ನಿಂದ ಗುರುವಾರ ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತು. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟು ಬಂದ್‌ಗೆ ಕರೆ ನೀಡಲಾಗಿತ್ತು.
ಕಮ್ಯುನಿಸ್ಟ್ ಪಕ್ಷಗಳು, ಕಾಂಗ್ರೆಸ್ ಹಾಗೂ ಇತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಲವು ಕಡೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ತಡೆದು, ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ರಾಜ್ಯದ ಪ್ರಮುಖ ನಗರಗಳಲ್ಲಿಯೂ INDIA ಒಕ್ಕೂಟದ ನಾಯಕರು ಮತ್ತು ಕಾರ್ಯಕರ್ತರು ಪಿಕೆಟಿಂಗ್ ನಡೆಸಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ‍್ಯಾಲಿಗಳನ್ನೂ ನಡೆಸಿದರು.
ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಬಸ್‌ಗಳು, ಆಟೋ ರಿಕ್ಷಾಗಳು ಮತ್ತು ಸರಕು ಸಾಗಣೆ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಯಲಿಲ್ಲ. ಕೆಲವು ಪ್ರದೇಶಗಳಲ್ಲಿ ರೈಲು ಸಂಚಾರಕ್ಕೂ ಕೆಲ ಗಂಟೆಗಳ ಕಾಲ ಅಡ್ಡಿಯಾಯಿತು. ರೈಲು ನಿಲ್ದಾಣಗಳಲ್ಲಿ ರೈಲುಗಳನ್ನು ತಡೆಯಲು ಪ್ರತಿಭಟನಾಕಾರರು ಮುಂದಾದಾಗ ಭದ್ರತಾ ಸಿಬ್ಬಂದಿ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆಗಳೂ ವರದಿಯಾಗಿವೆ.
ಹೆದ್ದಾರಿಗಳಲ್ಲಿ ನೂರಾರು ವಾಹನಗಳು ಸಿಲುಕಿಕೊಂಡ ಪರಿಣಾಮ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ರಾಜ್ಯದ ಪ್ರಮುಖ ನಗರಗಳಲ್ಲಿ ಖಾಸಗಿ ಸಂಸ್ಥೆಗಳು, ವ್ಯಾಪಾರ ಮಳಿಗೆಗಳು ಸೇರಿದಂತೆ ಹಲವು ವಾಣಿಜ್ಯ ಸಂಸ್ಥೆಗಳು ಬಂದ್‌ಗೆ ಬೆಂಬಲವಾಗಿ ಮುಚ್ಚಿದ್ದವು.
ಬಂದ್ ಕುರಿತು ಮಾತನಾಡಿದ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ (OPCC) ಅಧ್ಯಕ್ಷ ಭಕ್ತ ಚರಣ್ ದಾಸ್, ರಾಜ್ಯಾದ್ಯಂತ ಬಂದ್ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಹೇಳಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ, MMDR ತಿದ್ದುಪಡಿ ಕಾಯ್ದೆ-2026 ರದ್ದತಿ, ಪಠ್ಯಪುಸ್ತಕಗಳಲ್ಲಿನ ದೋಷಗಳ ಆರೋಪದ ಹಿನ್ನೆಲೆಯಲ್ಲಿ ಒಡಿಶಾ ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಸಚಿವ ನಿತ್ಯಾನಂದ ಗೊಂಡ್ ರಾಜೀನಾಮೆ ಹಾಗೂ ಇತ್ತೀಚಿನ ಪ್ರವಾಹದಿಂದ ಬಾಧಿತರಾದವರಿಗೆ ತಕ್ಷಣ ಪರಿಹಾರ ಮತ್ತು ಪರಿಹಾರಧನ ನೀಡುವುದು ಪ್ರಮುಖ ಬೇಡಿಕೆಗಳಾಗಿವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಬಂದ್‌ನ ಪರಿಣಾಮ ನಗರಗಳಿಗಿಂತ ಹೆಚ್ಚು ಗೋಚರಿಸಿದೆ ಎಂದು ದಾಸ್ ಹೇಳಿದರು. ಶಾಲಾ-ಕಾಲೇಜುಗಳು, ಮಾರುಕಟ್ಟೆಗಳು, ಸಂಸ್ಥೆಗಳು ಹಾಗೂ ಸಾರಿಗೆ ಸೇವೆಗಳು ಹಲವು ಕಡೆ ಸ್ಥಗಿತಗೊಂಡಿದ್ದವು.
ಭುವನೇಶ್ವರದಲ್ಲಿ ಪ್ರವಾಸಿಗರು ಮತ್ತು ಹೊರರಾಜ್ಯಗಳಿಂದ ಆಗಮಿಸುವವರಿಗೆ ತೊಂದರೆಯಾಗದಂತೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ತುರ್ತು ಸೇವೆಗಳಿಗೆ ಸಹ ಅವಕಾಶ ಕಲ್ಪಿಸಲಾಗಿದೆ.
ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಮುಂದಿನ ಎರಡು ತಿಂಗಳಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ದಾಸ್ ಎಚ್ಚರಿಕೆ ನೀಡಿದರು.




