Monday, September 14, 2026

ಗಂಗೊಳ್ಳಿಯಲ್ಲಿ ಪರ್ಸಿನ್ ಬೋಟು ಮುಳುಗಡೆ; 25 – 30 ಮೀನುಗಾರರ ರಕ್ಷಣೆ

ಕುಂದಾಪುರ: ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಪರ್ಸಿನ್ ಬೋಟೊಂದು ಬುಧವಾರ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಸಮುದ್ರದ ನೀರಿನಲ್ಲಿ ಮುಳುಗಿದ್ದು, ಬೋಟಿನಲ್ಲಿದ್ದ 27 ಮಂದಿ ಮೀನುಗಾರರನ್ನು ರಕ್ಷಿಸಲಾಗಿದ್ದು, ಬೋಟ್ ಅವಘಡದಿಂದ ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

ಭಟ್ಕಳ ಮುಂಡಳ್ಳಿ ಮೂಲದ ನಾಗರಾಜ ಮೊಗೇರ ಮಾಲಕತ್ವದ ಶ್ರೀ ಬಾಲಾಂಜನೇಯ ಹೆಸರಿನ ಪರ್ಸಿನ್ ಬೋಟಿನಲ್ಲಿ 27 ಮಂದಿ ಮೀನುಗಾರರು ಬುಧವಾರ ಗಂಗೊಳ್ಳಿಯಿಂದ ಮೀನುಗಾರಿಕೆಗೆ ತೆರಳಿದ್ದು ಗಂಗೊಳ್ಳಿ ಬಂದರಿನಿಂದ ಅನತಿ ದೂರದಲ್ಲಿ ಅಳಿವೆ ಪ್ರದೇಶದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್ ಒಳಗೆ ನೀರು ನುಗ್ಗಲಾರಂಭಿಸಿತು.

ಬೋಟಿನಲ್ಲಿದ್ದ ಮೀನುಗಾರರು ಅಪಾಯದ ಮುನ್ಸೂಚನೆ ಅರಿತು ಗಂಗೊಳ್ಳಿ ಬಂದರಿನಲ್ಲಿರುವ ಬೋಟ್ನವರಿಗೆ ಮಾಹಿತಿ ನೀಡಿದ್ದು, ಆ ಕೂಡಲೇ ಕಾರ್ಯಪ್ರವೃತರಾದ ಸ್ಥಳೀಯ ಮೀನುಗಾರರು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸರೊಂದಿಗೆ ಎರಡು ಬೋಟುಗಳಲ್ಲಿ ಸಮುದ್ರಕ್ಕೆ ತೆರಳಿ ಅಪಾಯದಲ್ಲಿದ್ದ ಎಲ್ಲಾ ಮೀನುಗಾರರನ್ನು ರಕ್ಷಿಸಿ ದ್ದಾರೆ. ಬೋಟ್ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ ಬಲೆ ಮತ್ತಿತರ ಸಲಕರಣೆಗಳು ಸಮುದ್ರ ಪಾಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಲೆಗಳ ಅಬ್ಬರ ಹೆಚ್ಚಾಗಿರುವುದ ರಿಂದ ಮತ್ತು ಬೋಟು ನೀರಿನಲ್ಲಿ ಭಾಗಶ: ಮುಳುಗಿರುವುದರಿಂದ ಅಪಘಾತಕ್ಕೀಡಾದ ಬೋಟನ್ನು ಎಳೆ ತರಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಬೋಟಿನಲ್ಲಿದ್ದ 16 ಸ್ಥಳೀಯ ಮತ್ತು 11 ಒರಿಸ್ಸಾ ಮೂಲದ ಮೀನುಗಾರರ ಪೈಕಿ ಓರ್ವ ಮೀನುಗಾರನಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೀನುಗಾರರು ಸುರಕ್ಷಿತವಾಗಿ ಗಂಗೊಳ್ಳಿ ಬಂದರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಬಂದರಿನಿಂದ 2-3 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಿರತರವಾಗಿದ್ದ ವೇಳೆ ಫೈಬರ್ ತುಂಡಾಗಿ, ನೀರು ಒಳ ಬಂದು, ಮುಳುಗಡೆಯಾಗಿದೆ. ಗಂಗೊಳ್ಳಿ ಬಂದರಿನಿಂದ ಬುಧವಾರ ಮಧ್ಯಾಹ್ನ ಮೀನುಗಾರಿಕೆಗೆ ಹೊರಟಿತ್ತು.

ಸಮುದ್ರದಲ್ಲಿ ಪರ್ಸಿನ್ ಬೋಟ್ ಮುಳುಗುತ್ತಿರುವ ಸುದ್ಧಿ ತಿಳಿದ ಕೂಡಲೇ ಬಿ.ಶೇಖರ ಕುಂದರ್ ಮರವಂತೆ ಮತ್ತು ರಾಮಣ್ಣ ಉಪ್ಪುಂದ ಅವರು ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಿಸಲು ತಮ್ಮ ಬೋಟು ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಸ್ಥಳೀಯರಾದ ಅಭಿಷೇಕ ಖಾರ್ವಿ ಮಲ್ಯರಬೆಟ್ಟು, ಚಂದ್ರಶೇಖರ ಖಾರ್ವಿ ಉಪ್ಪುಂದ, ಸಂದೇಶ ಎಸ್. ಮತ್ತು ಈಶ್ವರ ಲೋಕಪ್ಪ ತಾಂಡೇಲ ಅವರು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ ಠಾಣೆಯ ಇನ್ಸಪೆಕ್ಟರ್ ರಮೇಶ ಕೆ., ಉಪನಿರೀಕ್ಷಕ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳೊಂದಿಗೆ ಬೋಟಿನಲ್ಲಿ ತೆರಳಿ ಮೀನುಗಾರರ ರಕ್ಷಣೆಗೆ ನೆರವಾದರು. ಸ್ಥಳೀಯ ಮೀನುಗಾರರ ಮತ್ತು ಕರಾವಳಿ ಕಾವಲು ಪೊಲೀಸರ ಸಮಯೋಚತ ಕಾರ್ಯಾಚರಣೆಯಿಂದ ಮೀನುಗಾರರು ಸುರಕ್ಷಿತವಾಗಿ ದಡ ಸೇರಲು ಸಾಧ್ಯವಾಗಿದೆ.

ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ರಮೇಶ್, ಎಸ್ಐ ಸುಬ್ರಹ್ಮಣ್ಯ, ಸಿಬಂದಿಯಾದ ರಾಘವೇಂದ್ರ, ನಾಗರಾಜ್ ಖಾರ್ವಿ, ನಾಗೇಶ್, ರಮೇಶ್, ಕಿರಣ್, ಯುವರಾಜ್, ಕೆಎನ್ ಡಿ ಸಿಬಂದಿ ಸಂದೇಶ್, ಸಂತೋಷ್ ಖಾರ್ವಿ, ಮೀನುಗಾರರಾದ ಸಂದೇಶ, ರಾಮ ಖಾರ್ವಿ, ಅಭಿ ಗಂಗೊಳ್ಳಿ, ಶೇಖರ್ ಕುಂದರ್, ಚಂದ್ರಶೇಖರ ಖಾರ್ವಿ, ಇನ್ನಿತರ ಮೀನುಗಾರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಬಗ್ಗೆ ಗಂಗೊಳ್ಳಿ ಕರಾವಳಿ ಕಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.