Monday, September 14, 2026

ರೌಡಿಯಂತೆ ವರ್ತಿಸಿದ ವೈದ್ಯ: ಪತ್ರಕರ್ತನ ತಾಳ್ಮೆಗೆ ವ್ಯಾಪಕ ಪ್ರಶಂಸೆ

ಸರಕಾರಿ ವೈದ್ಯ ರೊಬ್ಬರ ಭ್ರಷ್ಟಾಚಾರದ ಬಗ್ಗೆ, ಗಮನಸೆಳೆಯುವಂತೆ ವರದಿ ಮಾಡಿದ್ದ, ಕನ್ನಡಪ್ರಭ ಪತ್ರಿಕೆಯ ಕುಂದಾಪುರ ವರದಿಗಾರನ ಮೇಲೆ ಆರೋಪ ಹೊತ್ತ ವೈದ್ಯನೇ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪತ್ರಕರ್ತರ ಮೇಲಿನ ಈ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ

ಉಡುಪಿ: ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ದಿಟ್ಟವಾಗಿ ವರದಿ ಮಾಡಿದ್ದ ಕನ್ನಡಪ್ರಭ ಪತ್ರಿಕೆಯ ಕುಂದಾಪುರ ವರದಿಗಾರ ಶ್ರೀಕಾಂತ ಹೆಮ್ಮಾಡಿ ಅವರ ಮೇಲೆ ಸರ್ಕಾರಿ ವೈದ್ಯರೊಬ್ಬರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಘಟನೆಗೆ ಪತ್ರಕರ್ತರ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕುಂದಾಪುರ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಮಹೇಂದ್ರ ಶೆಟ್ಟಿ ಅವರು ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎನ್ನಲಾಗಿದೆ.

ಭ್ರಷ್ಟಾಚಾರದ ಕುರಿತು ದಿಟ್ಟ ವರದಿ
ಕೆಲ ದಿನಗಳ ಹಿಂದೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ರೋಗಿಗಳಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪದ ಕುರಿತು ಶ್ರೀಕಾಂತ ಹೆಮ್ಮಾಡಿ ಅವರು ವರದಿ ಪ್ರಕಟಿಸಿದ್ದರು. ಹೆಸರು ಬಹಿರಂಗಪಡಿಸಲು ಇಚ್ಛಿಸದ ರೋಗಿಗಳ ಹೇಳಿಕೆಗಳನ್ನು ಆಧರಿಸಿ ‘ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಭ್ರಷ್ಟಾಚಾರದ ಕರಿ ನೆರಳು’ ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಲಾಗಿತ್ತು. ಈ ವರದಿಗೆ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಅವರೂ ಪ್ರತಿಕ್ರಿಯಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ವರದಿ ಬಳಿಕ ವೈದ್ಯರ ತಾತ್ಕಾಲಿಕ ವರ್ಗಾವಣೆ

ವರದಿ ಪ್ರಕಟವಾದ ಬಳಿಕ ಆರೋಗ್ಯ ಇಲಾಖೆ ಡಾ. ಮಹೇಂದ್ರ ಶೆಟ್ಟಿ ಅವರನ್ನು ಕಾರ್ಕಳ ತಾಲೂಕಿಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಿತ್ತು ಎನ್ನಲಾಗಿದೆ. ಈ ಕ್ರಮವನ್ನು ವೈದ್ಯರ ವಿರುದ್ಧ ಪತ್ರಕರ್ತರು ನಡೆಸುತ್ತಿರುವ ಶೋಷಣೆ ಎಂಬ ರೀತಿಯಲ್ಲಿ ಡಾ. ಶೆಟ್ಟಿ ಅವರು ಸಾಮಾಜಿಕ ಜಾಲತಾಣದ ಸ್ಟೇಟಸ್‌ಗಳಲ್ಲಿ ಹಾಕಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ವರದಿಗಾರ ಶ್ರೀಕಾಂತ ಹೆಮ್ಮಾಡಿ ಅವರಿಗೆ ವಾಟ್ಸಪ್ ಸ್ಟೇಟಸ್ ಮೂಲಕ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಹೋಟೆಲ್‌ನಲ್ಲಿ ಏಕಾಏಕಿ ಹಲ್ಲೆ ಆರೋಪ

ಇಂದು ಬೆಳಗ್ಗೆ ಶ್ರೀಕಾಂತ ಹೆಮ್ಮಾಡಿ ಅವರು ತಮ್ಮ ಪತ್ನಿ ಹಾಗೂ ಪತ್ರಕರ್ತ ಸ್ನೇಹಿತರೊಂದಿಗೆ ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ಡಾ. ಮಹೇಂದ್ರ ಶೆಟ್ಟಿ ಅಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಮೊದಲು ಮಾತನಾಡುವುದಿದೆ ಎಂದು ಶ್ರೀಕಾಂತ ಅವರನ್ನು ಬದಿಗೆ ಕರೆದುಕೊಂಡು ಹೋದ ವೈದ್ಯರು, ಬಳಿಕ ಏಕಾಏಕಿ ಅವರ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳದಲ್ಲಿದ್ದ ಶ್ರೀಕಾಂತ ಅವರ ಪತ್ನಿ ತಕ್ಷಣ ರಕ್ಷಣೆಗೆ ಧಾವಿಸಿ ವೈದ್ಯರನ್ನು ತಡೆದಿದ್ದಾರೆ ಎನ್ನಲಾಗಿದೆ. ಘಟನೆಯ ಸಂದರ್ಭದಲ್ಲಿ ಶ್ರೀಕಾಂತ ಹೆಮ್ಮಾಡಿ ಅವರು ತಾಳ್ಮೆಯಿಂದ ವರ್ತಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವೈದ್ಯರ ವಿರುದ್ಧ ಕ್ರಮಕ್ಕೆ ಪತ್ರಕರ್ತರ ಸಂಘ ಆಗ್ರಹ

ಘಟನೆಗೆ ಸಂಬಂಧಿಸಿದಂತೆ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಡಾ. ಮಹೇಂದ್ರ ಶೆಟ್ಟಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಕುಂದಾಪುರ ಪೊಲೀಸರು ಆಸ್ಪತ್ರೆಗೆ ತೆರಳಿ ಮಾಹಿತಿ ಹಾಗೂ ಹೇಳಿಕೆಗಳನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಪ್ರಶ್ನಿಸಿ ವರದಿ ಮಾಡುವುದು ತಪ್ಪೇ? ಪತ್ರಕರ್ತನ ಕರ್ತವ್ಯ ನಿರ್ವಹಣೆಗೆ ಹಲ್ಲೆಯೇ ಉತ್ತರವೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.