Saturday, May 9, 2026

ದ್ರಾವಿಡ ನೆಲದಲ್ಲಿ ‘ದಳಪತಿ’ ಕಮಾಲ್, ಬಂಗಾಳದಲ್ಲಿ ‘ದೀದಿ’ ಆಡಳಿತಕ್ಕೆ ಗುಡ್ ಬೈ ಹೇಳಿದ ಮತದಾರ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಖ್ಯಾತ ನಟ ‘ದಳಪತಿ’ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಅಭೂತಪೂರ್ವ ಮುನ್ನಡೆ ಸಾಧಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ. ದಶಕಗಳಿಂದ ರಾಜ್ಯವನ್ನಾಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಶಾಕ್ ನೀಡಿರುವ ವಿಜಯ್, ಮೊದಲ ಪ್ರಯತ್ನದಲ್ಲೇ ‘ಕಿಂಗ್ ಮೇಕರ್’ ಬದಲು ನೇರವಾಗಿ ‘ಕಿಂಗ್’ ಆಗುವತ್ತ ಹೆಜ್ಜೆ ಹಾಕಿದ್ದಾರೆ.

234 ವಿಧಾನಸಭಾ ಕ್ಷೇತ್ರಗಳ ಪೈಕಿ ವಿಜಯ್ ಅವರ TVK ಪಕ್ಷವು ಅಚ್ಚರಿಯ ರೀತಿಯಲ್ಲಿ ಮುನ್ನಡೆ ಸಾಧಿಸಿದೆ. ಪ್ರಸ್ತುತ ಟ್ರೆಂಡ್ಗಳ ಪ್ರಕಾರ, ವಿಜಯ್ ಅವರ ಪಕ್ಷವು ಬಹುಮತಕ್ಕೆ ಬೇಕಾದ 110 ಸ್ಥಾನಗಳ ಗಡಿ ದಾಟಿದೆ. ಇದು ತಮಿಳುನಾಡು ರಾಜಕಾರಣದಲ್ಲಿ ಹೊಸ ಯುಗದ ಆರಂಭ ಎಂದೇ ವಿಶ್ಲೇಷಿಸಲಾಗುತ್ತಿದೆ. ಆಡಳಿತಾರೂಢ ಡಿಎಂಕೆ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟ ಎರಡನೇ ಸ್ಥಾನ ಪಡೆಯುತ್ತಿದೆ. ಕಾಲಿವುಡ್ನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆ ದಟ್ಟವಾಗಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ತೀವ್ರ ಹಿನ್ನಡೆ ಅನುಭವಿಸಿದ್ದು, ಅನಿರೀಕ್ಷಿತವಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಮೈತ್ರಿಕೂಟವು ಸದ್ಯಕ್ಕೆ ಎರಡನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಡಿಎಂಕೆ ಸರ್ಕಾರದ ಸುಮಾರು 31 ಸಚಿವರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಆಡಳಿತ ವಿರೋಧಿ ಅಲೆಯ ತೀವ್ರತೆಯನ್ನು ತೋರಿಸುತ್ತಿದೆ.

ಚುನಾವಣಾ ಪೂರ್ವದಲ್ಲಿ ವಿಜಯ್ ಅವರ ಪಕ್ಷವು ಕೇವಲ ‘ಕಿಂಗ್ ಮೇಕರ್’ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ, ಈಗಿನ ಟ್ರೆಂಡ್ಗಳು ವಿಜಯ್ ಅವರೇ ನೇರವಾಗಿ ಮುಖ್ಯಮಂತ್ರಿ ಪೀಠ ಅಲಂಕರಿಸುವುದನ್ನು ಖಚಿತಪಡಿಸುತ್ತಿವೆ. ವಿಜಯ್ ಅವರ ಅಪಾರ ಅಭಿಮಾನಿ ಬಳಗ ಮತ್ತು ಯುವ ಮತದಾರರು ಬದಲಾವಣೆಯನ್ನು ಬಯಸಿ ದೊಡ್ಡ ಮಟ್ಟದಲ್ಲಿ ಮತ ಚಲಾಯಿಸಿದ್ದಾರೆ. ಎಂ.ಜಿ.ಆರ್ ಮತ್ತು ಜಯಲಲಿತಾ ಅವರ ನಂತರ ಸಿನಿಮಾ ರಂಗದಿಂದ ಬಂದು ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಂಡ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಿದ್ದಾರೆ.

ಇತ್ತ ಜಿದ್ದಾಜಿದ್ದಿಗೆ ಹೆಸರಾಗಿದ್ದ ಬಂಗಾಳದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಅನ್ನು ಸೋಲಿಸಿ ಬಿಜೆಪಿ ಪಕ್ಷ ಪ್ರಥಮ ಸ್ಥಾನಿಯಾದರೆ ತೃಣಮೂಲ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ನಿರೀಕ್ಷೆಯಂತೆ 126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದ್ದು ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದು ವಿರೋಧ ಪಕ್ಷ ಕಾಂಗ್ರೆಸ್ 25 ರಿಂದ 30 ಸ್ಥಾನಗಳಿಗಷ್ಠೆ ಸೀಮಿತವಾಗಿದೆ.

140 ಕ್ಷೇತ್ರಗಳಿರುವ ಕೇರಳದಲ್ಲಿ ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು. ಆಡಳಿತಾರೂಢ ಎಲ್ಡಿಎಫ್ 36 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ ಈ ಮೂಲಕ ಯುಡಿಎಫ್ ಅಧಿಕಾರ ಸ್ಥಾಪನೆ ಮಾಡುವುದು ಖಚಿತವಾಗಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿ ಎಫ್ ಸಂಪೂರ್ಣ ಸೋತಿದ್ದು ಈ ಮೂಲಕ ದೇಶದಲ್ಲಿನ ಏಕೈಕ ಎಡರಂಗ ಸರಕಾರದ ಆಡಳಿತ ಕೊನೆಗೊಂಡಂತಾಗಿದೆ.

ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗವು (ಎಲ್‌ಡಿಎಫ್) ಸೋತಿರುವುದರಿಂದ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಯಾವುದೇ ಎಡಪಂಥೀಯ ಸರಕಾರ ಇರುವುದಿಲ್ಲ.

ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ 2016ರಲ್ಲಿ ಕೇರಳದಲ್ಲಿ ಅಧಿಕಾರಕ್ಕೆ ಬಂದಿತ್ತು ಮತ್ತು ಅದು ದೇಶದಲ್ಲಿಯ ಕೊನೆಯ ಕಮುನಿಸ್ಟ್ ಪಕ್ಷದ ಸರಕಾರವಾಗಿತ್ತು. ಆದರೆ 2026ರ ಚುನಾವಣೆಗಳಲ್ಲಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಮರಳಲು ಸಜ್ಜಾಗಿದ್ದು,ಎಡರಂಗವು ತನ್ನ ಕೊನೆಯ ಅಧಿಕಾರದ ನೆಲೆಯನ್ನೂ ಕಳೆದುಕೊಂಡಿದೆ.

30 ಕ್ಷೇತ್ರಗಳಿರುವ ಪುದುಚೇರಿಯಲ್ಲಿ ಬಹುಮತಕ್ಕೆ 16 ಸ್ಥಾನಗಳ ಅಗತ್ಯವಿದ್ದು. ಬಿಜೆಪಿ 20 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 7 ಹಾಗೂ ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಪಂಚರಾಜ್ಯಗಳ ಚುನಾವಣೆಯಲ್ಲಿ ‘ದಳಪತಿ’ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಅಭೂತಪೂರ್ವ ಜಯ ಸದ್ಯ ಚರ್ಚೆಯ ವಿಷಯವಾಗಿದ್ದು ಯಾರೂ ಕೂಡ ಊಹಿಸದ ಗೆಲುವು ದಾಖಲಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ವಿಜಯ್ ಮುಖ್ಯಮಂತ್ರಿ ಆಗುವುದು ಖಚಿತವಾಗಿದ್ದು ಅವರಿಗೆ ಪೂರ್ಣ ಬಹುಮತಕ್ಕೆ ಇನ್ನೂ ಸ್ವಲ್ಪ ಸ್ಥಾನಗಳ ಕೊರತೆ ಇದ್ದು ಯಾರು ಬೆಂಬಲ ಯಾಚಿಸಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ. ಈಗಾಗಲೇ ವಿಜಯ್ ಅವರ ತಂದೆ ಕಾಂಗ್ರೆಸ್ ಬೆಂಬಲ ಯಾಚಿಸಿದ್ದು ತನ್ನ ನಿರ್ಧಾರ ಏನು ಎನ್ನುವುದು ಇನ್ನಷ್ಟೇ ತಿಳಿಸಬೇಕಾಗಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ವಿಜಯ್ ಅವರನ್ನು ಬೆಂಬಲಿಸಿದರೆ ಸ್ಟಾಲಿನ್ ನೇತೃತ್ವದ ಡಿಎಂಕೆ ಕೂಡ ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಸ್ಪಷ್ಟ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಾಗಿದೆ. ದ್ರಾವಿಡ ನೆಲದಲ್ಲಿ ಹಿಂದೆ ಇದ್ದ ಪ್ರಾದೇಶಿಕ ಪಕ್ಷವನ್ನು ಸೋಲಿಸಿ ಹೊಸ ಪಕ್ಷ ಅಧಿಕಾರಕ್ಕೆ ಬರುವ ತವಕದಲ್ಲಿದ್ದು, ಇದರೊಂದಿಗೆ ಬಂಗಾಳ, ಅಸ್ಸಾಂ, ಪುದುಚೆರಿಯಲ್ಲಿ ಬಿಜೆಪಿ, ಹಾಗೂ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆರುವ ಮೂಲಕ ಜನತೆಗೆ ಮುಂದಿನ ಐದು ವರ್ಷ ಉತ್ತಮ ಆಡಳಿತ ನೀಡಲಿ ಎಂಬ ಹಾರೈಕೆ ಮತದಾರ ಪ್ರಭುಗಳದ್ದು.

More like this
Related

ಬಹುಮತ ಸಾಬೀತುಪಡಿಸಲು ವಿಫಲ: ವಿಜಯ್‌ಗೆ ಸರ್ಕಾರ ರಚನೆಗೆ ರಾಜ್ಯಪಾಲರಿಂದ ಇನ್ನೂ ಆಹ್ವಾನವಿಲ್ಲ

ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಸಿ. ಜೋಸೆಫ್ ವಿಜಯ್...

ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹಬೀಬ್ ಆಲಿ ಆಗ್ರಹ

ಉಡುಪಿ: ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯ ಸಚೇತಕರಾದ ಸಲೀಂ...

ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ,...

ಉಡುಪಿ ಅಗ್ನಿ ದುರಂತ: ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ಶೂ ಬಜಾರ್ ಸಿಬ್ಬಂದಿಗೆ ಗೌರವ

ಉಡುಪಿ: ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಕಟ್ಟಡದಲ್ಲಿ ಇತ್ತೀಚೆಗೆ...

Copying is disabled on Udupi Digital News.