Tuesday, September 15, 2026

ರಾ.ಹೆ. ಅಗಲೀಕರಣ ಕಾಮಗಾರಿ: ಹಾನಿಗೊಳಗಾದ ನೀರು ಸರಬರಾಜಿನ ಪೈಪ್ಲೈನ್ ದುರಸ್ಥಿ ಕೈಗೊಳ್ಳಿ – ಸಂಸದ ಕೋಟ


ಉಡುಪಿ: ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿಯ ಹಿನ್ನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರು ಸರಬರಾಜಿನ ಪೈಪ್ಲೈನ್ ಹಾನಿಗೊಳಗಾಗಿದ್ದು, ದುರಸ್ಥಿ ಹಾಗೂ ಮರುಅಳವಡಿಕೆ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆಯಲ್ಲಿ ಆದ ಸಮಸ್ಯೆಯ ಬಗ್ಗೆ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ಕುಂದಾಪುರ ತಾಲೂಕಿನ ಕೋಟೇಶ್ವರ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಹಾಗೂ ಬ್ರಹ್ಮಾವರದ ಸಾಲಿಗ್ರಾಮ, ಕೋಟತಟ್ಟು, ಕೋಟ, ಮಣೂರು, ಪಾಂಡೇಶ್ವರ ಹಾಗೂ ಸಾಸ್ತಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ಕೈಗೊಂಡಿರುವ ಸಾರ್ವಜನಿಕ ಕುಡಿಯುವ ನೀರು ಸರಬರಾಜಿನ ಪೈಪ್ಲೈನ್ಗಳು ಹಾನಿಗೊಂಡು ಸಾರ್ವಜನಿಕರ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿದೆ. ಇವುಗಳ ದುರಸ್ಥಿ ಕಾರ್ಯಗಳನ್ನು ಆದ್ಯತೆಯ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಬೇಕೆಂದರು.

ಅಗಲೀಕರಣ ಕಾಮಗಾರಿಯಿಂದ ಮುಂಬರುವ ದಿನಗಳಲ್ಲಿ ಪೈಪ್ಲೈನ್ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಅಲ್ಲದೇ ಪೈಪ್ಲೈನ್ಗಳು ರಸ್ತೆ ಕ್ಯಾರೇಜ್ ವೇ ಮಧ್ಯದಲ್ಲಿ ಬರುತ್ತಿರುವುದರಿಂದ ಪ್ರತ್ಯೇಕ ಪೈಪ್ಲೈನ್ ಅಳವಡಿಕೆ ಅವಶ್ಯಕತೆ ಇದೆ. ದುರಸ್ಥಿ ಹಾಗೂ ಪ್ರತ್ಯೇಕ ಪೈಪ್ಲೈನ್ ಅಳವಡಿಕೆಗೆ ಗ್ರಾಮ ಪಂಚಾಯತ್ ಗಳಲ್ಲಾಗಲಿ, ಗ್ರಾಮೀಣಾಭೀವೃದ್ಧಿ ಇಲಾಖೆಯಿಂದ ಅನುದಾನದ ಲಭ್ಯತೆ ಇಲ್ಲದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದುರಸ್ಥಿ ಸೇರಿದಂತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದರು.

ಹಾಲಿ ರಸ್ತೆ ಮಧ್ಯ ಭಾಗದಲ್ಲಿರುವ ಪೈಪ್ಲೈನ್ಗಳ ಬದಲಿಯಾಗಿ ಹೊಸದಾಗಿ ಪೈಪ್ಲೈನ್ ಕಾಮಗಾರಿಗಳನ್ನು ಸರ್ವೀಸ್ ರಸ್ತೆಯಲ್ಲಿ ಬಾಕಿ ಉಳಿದಿರುವ 2.5 ಮೀಟರ್ ಜಾಗದಲ್ಲಿ ಅಳವಡಿಸುವುದು ಸೂಕ್ತ ಎಂದರು.

ಪ್ರಸ್ತುತ ದುರಸ್ಥಿ ಸೇರಿದಂತೆ ಹೊಸ ಪೈಪ್ಲೈನ್ಗಳನ್ನು ಅಳವಡಿಸಲು ತಯಾರಿಸಿರುವ ಅಂದಾಜು ಪಟ್ಟಿಯ ವೆಚ್ಚ ಹೆಚ್ಚಿದ್ದು, ಈ ಬಗ್ಗೆ ಮರು ಪರಿಶೀಲಿಸಿ, ಸರಿಯಾಗಿ ಅಂದಾಜು ವೆಚ್ಚ ತಯಾರಿಸಿ ನೀಡಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರುಗಳಿಗೆ ತಿಳಿಸಿದ ಅವರು, ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೈಗೊಂಡ ನಿರ್ಣಯದ ನಡವಳಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಕಚೇರಿಗೆ ಕಳುಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರುಗಳಾದ ಯಶ್ಪಾಲ್ ಎ ಸುವರ್ಣ ಹಾಗೂ ಎ. ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮೀಷನರ್ ರಶ್ಮಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆಯ ಅಭಿಯಂತರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

More like this
Related

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರ ಪಾಣಿಯಾಗಿ ಜನಾರ್ದನ್ ಕೊಡವೂರು ನೇಮಕ

ಉಡುಪಿ: ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ...

ಇತರರಿಗೆ ಸಹಾಯ ಮಾಡುವ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಬಹುದು : ಬಿಷಪ್ ಲೆಸ್ಲಿ ಸಿ ಡಿಸೋಜಾ

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ...

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ಆಘಾತಕಾರಿ ಫಲಿತಾಂಶ: ಹೆಂಡತಿ, ಅಪ್ಪ, ಅಮ್ಮನ ವೋಟ್ ಯಾರಿಗೆ?

ಜೈಪುರ: ರಾಜಸ್ಥಾನ ನಾಗರಿಕ ಚುನಾವಣೆಯ ಫಲಿತಾಂಶದ ನಡುವೆ ಆಘಾತಕಾರಿ ಮತ್ತು ಆಸಕ್ತಿದಾಯಕ...

Copying is disabled on Udupi Digital News.