ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಸಾವಿನ ಸಂಖ್ಯೆ 675ಕ್ಕೆ ಏರಿಕೆಯಾಗಿದ್ದು, ಇನ್ನೂ 2,498 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಹಾಗೂ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಭೂಕುಸಿತ ಪೀಡಿತ ಪ್ರದೇಶಗಳಿಂದ ಈವರೆಗೆ 675 ಮೃತದೇಹಗಳನ್ನು ಹೊರತೆಗೆಯಲಾಗಿದೆ. ನಾಪತ್ತೆಯಾಗಿರುವವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪ್ರಾಧಿಕಾರ ತಿಳಿಸಿದೆ.
ನೇಪಾಳದ ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, ಶನಿವಾರ ಸ್ಥಳೀಯ ಕಾಲಮಾನ ಸಂಜೆ 5.30ರ ವೇಳೆಗೆ ಒಟ್ಟು 753 ಪ್ರವಾಸಿಗರೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ಇವರ ಪೈಕಿ 589 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ.
ಈ ನಡುವೆ, ರಸುವಾ, ನುವಾಕೋಟ್ ಹಾಗೂ ಧಾದಿಂಗ್ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಂಕಷ್ಟಕ್ಕೊಳಗಾದವರಿಗೆ ನೆರವು ನೀಡುವಂತೆ ಕಠ್ಮಂಡು ಜಿಲ್ಲಾ ಆಡಳಿತ ಕಚೇರಿ ಶನಿವಾರ ತುರ್ತು ಮನವಿ ಮಾಡಿದೆ. ಕಠ್ಮಂಡುವಿನ ವಿವಿಧ ಸಂಘ-ಸಂಸ್ಥೆಗಳು, ಉದ್ಯಮಗಳು ಹಾಗೂ ಸಾರ್ವಜನಿಕರು ಪರಿಹಾರ ಸಾಮಗ್ರಿಗಳನ್ನು ದಾನ ಮಾಡುವಂತೆ ಸೂಚಿಸಲಾಗಿದೆ.
ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಭೀಕರ ಪ್ರವಾಹ ಉಂಟಾಗಿದ್ದು, ಹಲವು ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಜೀವಹಾನಿ ಸಂಭವಿಸಿದೆ. ಜಲವಿದ್ಯುತ್ ಯೋಜನೆಗಳು, ರಸ್ತೆಗಳು, ಸೇತುವೆಗಳು ಸೇರಿದಂತೆ ಹಲವು ಮೂಲಸೌಕರ್ಯಗಳು ಹಾನಿಗೊಳಗಾಗಿವೆ.
ನೇಪಾಳದ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತವೂ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ ನೆರವು ಮುಂದುವರಿಸಿದೆ. ಭಾರತದ ನಾಲ್ಕನೇ ಪರಿಹಾರ ವಿಮಾನವು ಹೆಚ್ಚುವರಿಯಾಗಿ 11 ಟನ್‌ಗಳಷ್ಟು ನೆರವು ಸಾಮಗ್ರಿಗಳೊಂದಿಗೆ ನೇಪಾಳಕ್ಕೆ ತೆರಳಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶನಿವಾರ ತಿಳಿಸಿದ್ದಾರೆ.
ಸಿ-130 ವಿಮಾನದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸುರಂಗ ತಾಂತ್ರಿಕ ತಂಡ ಹಾಗೂ ಅಗತ್ಯ ಉಪಕರಣಗಳು, ಡಿಎನ್‌ಎ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ತಜ್ಞರ ತಂಡ ಮತ್ತು ಉಪಕರಣಗಳು, ಕಂಬಳಿಗಳು, ಸ್ಲೀಪಿಂಗ್ ಬ್ಯಾಗ್‌ಗಳು, ಟಾರ್ಪಾಲಿನ್‌ಗಳು, ಪ್ಲಾಸ್ಟಿಕ್ ಶೀಟ್‌ಗಳು ಹಾಗೂ ನೈರ್ಮಲ್ಯ ಕಿಟ್‌ಗಳು ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.
230 ಅಡಿ ಉದ್ದದ ಸಿಂಗಲ್ ಲೇನ್ ಮಾಡ್ಯುಲರ್ ಸ್ಟೀಲ್ ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಉಪಕರಣಗಳನ್ನು ಹೊತ್ತ 16 ಟ್ರಕ್‌ಗಳು ಈಗಾಗಲೇ ನೇಪಾಳ ತಲುಪಿವೆ. ಇನ್ನೂ ಏಳು ಬೈಲಿ ಸೇತುವೆಗಳ ನಿರ್ಮಾಣಕ್ಕೆ ಅಗತ್ಯವಿರುವ ಉಪಕರಣಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು. ಅವುಗಳ ಅಳವಡಿಕೆಗೆ ತಾಂತ್ರಿಕ ತಂಡಗಳು ಕೂಡ ಶೀಘ್ರದಲ್ಲೇ ನೇಪಾಳ ತಲುಪಲಿವೆ ಎಂದು ಅವರು ಹೇಳಿದ್ದಾರೆ.
ಈವರೆಗೆ ಅಗತ್ಯ ಔಷಧಗಳು, ಪೋರ್ಟಬಲ್ ಜನರೇಟರ್‌ಗಳು, ಆಹಾರ ಪೊಟ್ಟಣಗಳು, ನೀರು ಶುದ್ಧೀಕರಣ ಮಾತ್ರೆಗಳು ಹಾಗೂ ತಾಂತ್ರಿಕ ಉಪಕರಣಗಳು ಸೇರಿದಂತೆ ಒಟ್ಟು 68.5 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ವಿಮಾನದ ಮೂಲಕ ಕಠ್ಮಂಡುವಿಗೆ ರವಾನಿಸಲಾಗಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.
ನೇಪಾಳದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಭಾರತದ ನೆರವು ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಬುಧವಾರ ಭಾರತೀಯ ವಾಯುಪಡೆಯ ಸಿ-130ಜೆ ಹರ್ಕ್ಯುಲಿಸ್ ವಿಮಾನದ ಮೂಲಕ ತಾತ್ಕಾಲಿಕ ಆಶ್ರಯ ವ್ಯವಸ್ಥೆಗಳು, ಕಂಬಳಿಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು ಹಾಗೂ ಔಷಧಗಳು ಸೇರಿದಂತೆ 10 ಟನ್‌ಗಳಷ್ಟು ತುರ್ತು ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ರವಾನಿಸಲಾಗಿತ್ತು.




