ಮಸ್ಕಟ್: ಒಮಾನ್‌ನ ಸೋಹರ್ ಲಂಗರು ಪ್ರದೇಶದಲ್ಲಿ ಭಾನುವಾರ ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಎಂಟಿ ಪೆಟ್ರೋ ಡಾಲ್ಫಿನ್ (MT Petro Dolphin) ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ಇಬ್ಬರು ಭಾರತೀಯ ನಾವಿಕರು ನಾಪತ್ತೆಯಾಗಿದ್ದಾರೆ. ಹಡಗಿನಲ್ಲಿದ್ದ 11 ಭಾರತೀಯ ನಾವಿಕರ ಪೈಕಿ ಒಂಬತ್ತು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಕೇಂದ್ರ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೋನೋವಾಲ್, ಅಕ್ಟೋಬರ್ 11ರಂದು ಸೋಹರ್ ಲಂಗರು ಪ್ರದೇಶದಲ್ಲಿ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿದೆ. ಹಡಗಿನಲ್ಲಿದ್ದ ಒಂಬತ್ತು ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಾಪತ್ತೆಯಾದವರ ಪತ್ತೆಗಾಗಿ ಸ್ಥಳೀಯ ಕರಾವಳಿ ರಕ್ಷಣಾ ಪಡೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ಒದಗಿಸಲು ಹಾಗೂ ನಾಪತ್ತೆಯಾದವರನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವರು ಹೇಳಿದ್ದಾರೆ.
ಮಸ್ಕಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಘಟನೆಯ ಕುರಿತು ಮಾಹಿತಿ ನೀಡಿದ್ದು, ನಿಕರಾಗುವಾ ಧ್ವಜ ಹೊಂದಿರುವ ಎಂಟಿ ಪೆಟ್ರೋ ಡಾಲ್ಫಿನ್ ಟ್ಯಾಂಕರ್‌ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಡಗಿನಲ್ಲಿದ್ದ 11 ಭಾರತೀಯ ನಾವಿಕರ ಪೈಕಿ ಇಬ್ಬರು ನಾಪತ್ತೆಯಾಗಿರುವ ವರದಿಯಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ರಾಯಭಾರ ಕಚೇರಿ ಎಕ್ಸ್‌ನಲ್ಲಿ ತಿಳಿಸಿದೆ.
ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮತ್ತೊಂದು ಹಡಗಿನ ಮೇಲೆ ದಾಳಿ ನಡೆದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಅಕ್ಟೋಬರ್ 6ರಂದು ಹೋರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಪನಾಮಾ ಧ್ವಜ ಹೊಂದಿದ್ದ ವಾಣಿಜ್ಯ ಹಡಗು ಎಂಟಿ ಆನ್ ಪೀಸ್ (MT On Peace) ಮೇಲೆ ಉತ್ಕ್ಷೇಪಕ ದಾಳಿ ನಡೆದಿತ್ತು. ಈ ದಾಳಿಯನ್ನು ಭಾರತ ಖಂಡಿಸಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪ್ರಕಾರ, ಆ ಹಡಗಿನಲ್ಲಿ ಒಟ್ಟು 19 ಸಿಬ್ಬಂದಿ ಇದ್ದರು. ಅವರಲ್ಲಿ 17 ಮಂದಿ ಭಾರತೀಯರು. ದಾಳಿಯಲ್ಲಿ 12 ಸಿಬ್ಬಂದಿ ಗಾಯಗೊಂಡಿದ್ದು, ಅವರಲ್ಲಿ 11 ಮಂದಿ ಭಾರತೀಯ ನಾವಿಕರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿತ್ತು.
ಪ್ರದೇಶದಲ್ಲಿ ಹಡಗುಗಳ ಮೇಲಿನ ನಿರಂತರ ದಾಳಿಗಳು ಭಾರತಕ್ಕೆ ತೀವ್ರ ಕಳವಳ ಉಂಟುಮಾಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಭಾರತ ಪುನರುಚ್ಚರಿಸಿದೆ.
ವಾಣಿಜ್ಯ ಹಡಗುಗಳು, ನಾವಿಕರು ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ಅಂತ್ಯಗೊಳ್ಳಬೇಕು. ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ನೌಕಾಯಾನ ಮತ್ತು ವ್ಯಾಪಾರ ಚಟುವಟಿಕೆಗಳು ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಬೇಕು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.




