Tuesday, November 3, 2026

ಟ್ರಂಪ್ ಅನಾವರಣಗೊಳಿಸಿದ ‘ಶಾಂತಿ ಮಂಡಳಿ’ಗೆ ಭಾರತ ದೂರ, ಪಾಕಿಸ್ತಾನ ಸಹಿ

ದಾವೋಸ್: ಗಾಜಾ ಪಟ್ಟಿಯಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಮತ್ತು ಸಂಭಾವ್ಯ ಜಾಗತಿಕ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ‘ಬೋರ್ಡ್ ಆಫ್ ಪೀಸ್’ (ಶಾಂತಿ ಮಂಡಳಿ) ಅನ್ನು ಅನಾವರಣಗೊಳಿಸಿದ್ದಾರೆ. ಆದರೆ ಈ ಹೊಸ ಶಾಂತಿ ಮಂಡಳಿಯ ನಿಯಮಾವಳಿಗೆ ಸಹಿ ಹಾಕುವ ಸಮಾರಂಭದಿಂದ ಭಾರತ ದೂರ ಉಳಿದಿದೆ.

ವಿಶ್ವ ಆರ್ಥಿಕ ವೇದಿಕೆ (WEF) ನಡೆಯುತ್ತಿರುವ ಸ್ವಿಸ್ ಪರ್ವತ ರೆಸಾರ್ಟ್ ದಾವೋಸ್‌ನಲ್ಲಿ ಟ್ರಂಪ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಜಾಗತಿಕ ನಾಯಕರಿಗೆ ಆಹ್ವಾನ ನೀಡಲಾಗಿದ್ದರೂ, ಭಾರತ ಈ ವಿಚಾರದಲ್ಲಿ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಇನ್ನು ಪಾಕಿಸ್ತಾನವು ‘ಬೋರ್ಡ್ ಆಫ್ ಪೀಸ್ ಚಾರ್ಟರ್’ಗೆ ಸಹಿ ಹಾಕಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಭಾಗವಾಗಿ ಈ ಮಂಡಳಿಯನ್ನು ಘೋಷಿಸಲಾಗಿದೆ.

ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ, ಜರ್ಮನಿ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ಟ್ರಂಪ್ ಅವರ ಶಾಂತಿ ಮಂಡಳಿ ಸೇರಲು ಸಹಿ ಮಾಡುವ ಸಮಾರಂಭವನ್ನು ಬಹಿಷ್ಕರಿಸಿವೆ. ಜರ್ಮನಿ, ಇಟಲಿ, ರಷ್ಯಾ, ತುರ್ಕಿಯೆ, ಉಕ್ರೇನ್, ಸ್ಲೊವೇನಿಯಾ ಮತ್ತು ಪರಾಗ್ವೆ ಕೂಡ ಆಹ್ವಾನವನ್ನು ತಿರಸ್ಕರಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿವೆ.

ಭಾರತದ ನಿಲುವಿನ ಬಗ್ಗೆ ಮಾತನಾಡಿದ ಮೂಲಗಳು, “ಇದು ಅತ್ಯಂತ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರುವುದರಿಂದ ಭಾರತ ವಿವಿಧ ಅಂಶಗಳನ್ನು ಪರಿಗಣಿಸುತ್ತಿದೆ. ಇಸ್ರೇಲ್–ಪ್ಯಾಲೆಸ್ತೀನ್ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ದ್ವಿ-ರಾಜ್ಯ ಪರಿಹಾರವೇ ಅಗತ್ಯ ಎಂಬ ನಿಲುವಿಗೆ ಭಾರತ ಬದ್ಧವಾಗಿದೆ” ಎಂದು ತಿಳಿಸಿವೆ.

ಶಾಂತಿ ಮಂಡಳಿಗೆ ಸಹಿ ಹಾಕಿದ ರಾಷ್ಟ್ರಗಳಲ್ಲಿ ಅರ್ಜೆಂಟೀನಾ, ಅರ್ಮೇನಿಯಾ, ಅಜೆರ್ಬೈಜಾನ್, ಬಹ್ರೇನ್, ಬೆಲಾರಸ್, ಈಜಿಪ್ಟ್, ಹಂಗೇರಿ, ಕಝಾಕಿಸ್ತಾನ್, ಮೊರಾಕೊ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮತ್ತು ವಿಯೆಟ್ನಾಂ ಸೇರಿವೆ.

ಅಮೆರಿಕದ ಯೋಜನೆಯಂತೆ, ಟ್ರಂಪ್ ಅವರ ‘ಬೋರ್ಡ್ ಆಫ್ ಪೀಸ್’ ಅನ್ನು ಹೊಸ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ರೂಪಿಸುವ ಉದ್ದೇಶವಿದ್ದು, ಇದು ವಿಶ್ವಸಂಸ್ಥೆಯ ಪಾತ್ರಕ್ಕೆ ಸವಾಲಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಎರಡು ವರ್ಷಗಳ ಇಸ್ರೇಲಿ ಸೇನಾ ಕಾರ್ಯಾಚರಣೆಯಿಂದ ಧ್ವಂಸಗೊಂಡ ಗಾಜಾ ಪಟ್ಟಿಯ ಆಡಳಿತದ ಮೇಲ್ವಿಚಾರಣೆ ಮತ್ತು ಪುನರ್ ಅಭಿವೃದ್ಧಿಗೆ ಅಗತ್ಯವಾದ ಹಣಕಾಸಿನ ಸಮನ್ವಯವನ್ನು ಈ ಮಂಡಳಿ ನೋಡಿಕೊಳ್ಳಲಿದೆ ಎಂದು ಹೇಳಲಾಗಿದೆ.

‘ಸಂಘರ್ಷದಿಂದ ಪೀಡಿತ ಪ್ರದೇಶಗಳಲ್ಲಿ ಸ್ಥಿರತೆ ಉತ್ತೇಜಿಸುವುದು, ಕಾನೂನುಬದ್ಧ ಹಾಗೂ ವಿಶ್ವಾಸಾರ್ಹ ಆಡಳಿತವನ್ನು ಮರುಸ್ಥಾಪಿಸುವುದು ಮತ್ತು ಶಾಶ್ವತ ಶಾಂತಿ ಕಾಪಾಡುವುದು ಈ ಮಂಡಳಿಯ ಮುಖ್ಯ ಉದ್ದೇಶ’ ಎಂದು ಶಾಂತಿ ಮಂಡಳಿಯ ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.

More like this
Related

ಬ್ರಹ್ಮಾವರದ ಫಿಶ್ ಫ್ಯಾಕ್ಟರಿಯಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ 30 ಮಕ್ಕಳು ಪತ್ತೆ: ಬಾಲಮಂದಿರಕ್ಕೆ ದಾಖಲು

ಉಡುಪಿ: ಬ್ರಹ್ಮಾವರ ತಾಲೂಕಿನ ಫಿಶ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರ ಮಕ್ಕಳಾದ ಸುಮಾರು 30...

31ನೇ ಬೈಲೂರು ವಾರ್ಡ್ – ರಸ್ತೆ ಡಾಮರೀಕರಣಗೊಳಿಸುವಂತೆ ರಮೇಶ್ ಕಾಂಚನ್ ನೇತೃತ್ವದಲ್ಲಿ ಪೌರಾಯುಕ್ತರಿಗೆ ಮನವಿ

ಶ್ರೀನಿವಾಸ ದೇವಸ್ಥಾನದ ಮುಖ್ಯರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ತನಕದ ರಸ್ತೆ ಉಡುಪಿ...

Copying is disabled on Udupi Digital News.